ಶಿರಸಿ:ರಾಜ್ಯದ ಪ್ರತಿಷ್ಠಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಡಿಸ್ಟ್ರಿಕ್ಟ್ ಕೋ- ಆಪರೇಟಿವ್ ಬ್ಯಾಂಕಿನ ಚುನಾವಣೆಗೆ ಜಿಲ್ಲೆಯ ನಾಯಕರು ಸಜ್ಜಾಗುತ್ತಿದ್ದಾರೆ. ನ.11 ರಂದು ನಡೆಯಲಿರುವ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಾಟಾಗಿವೆ.
ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಚುನಾವಣೆ, ಬಿಜೆಪಿ-ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ.. ಬ್ಯಾಂಕಿನಲ್ಲಿ ಒಟ್ಟು 19 ನಿರ್ದೇಶಕರ ಸ್ಥಾನವಿದ್ದು, ಅದರಲ್ಲಿ 16 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಾಥಮಿಕ ಪತ್ತಿನ ಸಂಘ, ಜಿಲ್ಲೆಯ ವಿವಿಧ ವಲಯಗಳನ್ನು ಪ್ರತಿನಿಧಿಸುವ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಹೊಸ ಮುಖಗಳು ಈ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಈಗಿರುವ ಸಮಿತಿಯವರೂ ಚುನಾವಣೆ ತಯಾರಿ ನಡೆಸಿದ್ದು, ಅ.30 ರಿಂದ ನ.11 ರವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಕಳೆದ ಬಾರಿಯ ಕೆಡಿಸಿಸಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಶಿವರಾಮ ಹೆಬ್ಬಾರ್ ಈಗ ಬಿಜೆಪಿ ಪಕ್ಷದಿಂದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದರಿಂದ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಗೆದ್ದುಕೊಂಡು ಎಸ್.ಎಲ್.ಘೋಟ್ನೇಕರ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಉಸ್ತುವಾರಿಯಾಗಿ ದೇಶಪಾಂಡೆ, ಶಾಸಕ ಹೆಬ್ಬಾರ್ ಎಲ್ಲರೂ ಕಾಂಗ್ರೆಸ್ನಲ್ಲಿದ್ದರು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಯ ಪ್ರಾಬಲ್ಯವಿದ್ದು, ಅನೇಕ ಬಿಜೆಪಿ ಪ್ರಮುಖರು ಚುನಾವಣೆಯಲ್ಲಿ ಆಯ್ಕೆ ಬಯಸಿದ್ದಾರೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆ ಈಗ ಸಹಕಾರಿ ಕ್ಷೇತ್ರದ ಜಿದ್ದಾಜಿದ್ದಿನ ಚುನಾವಣಾ ಕಣಕ್ಕೆ ಸಜ್ಜಾಗಿದೆ. ಸ್ವತಃ ಕೆಡಿಸಿಸಿ ನಿರ್ದೇಶಕರಾಗಿದ್ದ ಸಚಿವ ಹೆಬ್ಬಾರ್ ಸಹ ಪುನರ್ ಆಯ್ಕೆ ಬಯಸಿದ್ದಾರೆ ಎನ್ನಲಾಗಿದೆ.