ಕಾರವಾರ: ಅವರೆಲ್ಲರೂ ಕಡಲ ತೀರದಲ್ಲಿ ಜೀವನ ಕಂಡುಕೊಂಡ ಕಡಲ ಮಕ್ಕಳು. ನಿತ್ಯ ಮತ್ಸ್ಯ ಶಿಕಾರಿ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದವರಿಗೆ ಇದೀಗ ವಾಣಿಜ್ಯ ಬಂದರು ಯೋಜನೆ ಕಾಮಗಾರಿಯಿಂದಾಗಿ ಜಮೀನು ಕಳೆದುಕೊಳ್ಳುವುದು ಮಾತ್ರವಲ್ಲದೆ ಇದ್ದ ಸ್ಥಳದಿಂದಲೂ ಒಕ್ಕಲೆಬ್ಬಿಸುವ ಆತಂಕ ಕಾಡತೊಡಗಿದೆ.
ಒಕ್ಕಲೆಬ್ಬಿಸುವ ಭೀತಿಯಲ್ಲಿ ಕಡಲ ಮಕ್ಕಳು ಓದಿ: ಜೈಷ್ - ಎ - ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಬಂಧನ!
ಇಂತಹ ಆತಂಕ ಕಾಡುತ್ತಿರುವುದು ಹೊನ್ನಾವರ ತಾಲೂಕಿನ ಕಾಸರಕೋಡು, ಮಲ್ಲುಕುರ್ವಾ ಹಾಗೂ ಪಾವಿನ ಕುರ್ವೆ ಭಾಗದ ಜನರಿಗೆ. ಇಲ್ಲಿನ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ.
ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರು ಮಾಡಿದೆ. ಈಗಾಗಲೇ ಕಾಂಪೌಂಡ್ ಹಾಕಿಕೊಂಡಿದ್ದ ಕಂಪನಿ ಇಷ್ಟರಲ್ಲಿಯೇ ಕಾಮಗಾರಿ ನಡೆಸುವುದಾಗಿ ತಿಳಿಸಿತ್ತು. ಆದರೆ ಇದೀಗ ಏಕಾಏಕಿ ಯಾರಿಗೂ ಮಾಹಿತಿ ನೀಡದೇ ಕಡಲ ತೀರದ ಅಂಚಿನಲ್ಲಿ ಮಣ್ಣು ಸುರಿದು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಿಂದ ಶರಾವತಿ ಅಳಿವೆ ಮತ್ತು ಸಮುದ್ರ ಸಂಗಮ ಸ್ಥಳ ಪಕ್ಕದ ಜಾಗದಲ್ಲಿ ಕಾಂಪೌಂಡ್ ಹಾಕಿದ್ದ ಕಂಪನಿ ಹೂಳು ತೆಗೆಯುವ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಈ ಪ್ರದೇಶ ಹಿಂದೆ ಸ್ಥಳೀಯರಿಗೆ ನೀಡಿದ ಪ್ಲಾಟುಗಳಾಗಿದೆ. ಸರ್ವೆ ನಂಬರ್ 999ರಲ್ಲಿ 2 ಎಕರೆ 20 ಗುಂಟೆ ಪ್ರದೇಶದಲ್ಲಿ ನೂರಾರು ಜನರಿಗೆ ಒಂದು ಗುಂಟೆ ನಾಲ್ಕಾಣೆ ಜಾಗವನ್ನು ನೀಡಲಾಗಿದೆ. ಆದರೆ ಅದೇ ಸರ್ವೆ ನಂಬರ್ ಈಗ 305 ಎಂದು ಬದಲಾಗಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿ ಪಡೆಯದೇ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯರಾದ ಜಗದೀಶ ಆರೋಪಿಸಿದ್ದಾರೆ.
ಇನ್ನು ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು 600ಕ್ಕು ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ. ವಾಣಿಜ್ಯ ಬಂದರು ಕಾಮಗಾರಿ ನಡೆಸುತ್ತಿರುವ ಕಂಪನಿಗೆ ತಮ್ಮ ಜಾಗ ಎಲ್ಲಿಯವರೆಗೆ ಇದೆ ಎಂಬುದು ಗೊತ್ತಿಲ್ಲ. ಸರ್ಕಾರ ಕೂಡ ಅವರಿಗೆ ಸರಿಯಾದ ಮಾಹಿತಿ ನೀಡಿಲ್ಲವಂತೆ. ಇದೀಗ ಸ್ಥಳೀಯರಿಗೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ನಮ್ಮನೆಲ್ಲರನ್ನು ಒಕ್ಕಲೆಬ್ಬಿಸಿದಲ್ಲಿ ನಾವು ಎಲ್ಲಿಗೆ ತೆರಳಬೇಕು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಕಾರಣದಿಂದಲೇ ಯೋಜನೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು, ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಹೊನ್ನಾವರ ತಹಶೀಲ್ದಾರ್ ವಿವೇಕ್ ಶೆಣ್ವಿ ಅವರನ್ನು ಕೇಳಿದರೆ, ಖಾಸಗಿ ಕಂಪನಿ ನಿರ್ಮಾಣ ಮಾಡುತ್ತಿರುವ ಬಂದರು ಕಾಮಗಾರಿಗೆ ಸ್ಥಳೀಯರ ವಿರೋಧವಿದೆ. ತಮಗೆ ಮೀನುಗಾರಿಕೆಗೆ ತೊಂದರೆಯಾಗುವ ಬಗ್ಗೆ ಮತ್ತು ಮನೆಗಳು ತೆರವುಗೊಳ್ಳುವ ಆತಂಕದಿಂದ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಆದರೆ ಸ್ಥಳೀಯರಿಗೆ ಯಾವುದೇ ರಿತಿಯ ತೊಂದರೆಯಾಗುವುದಿಲ್ಲ ಎಂದಿದ್ದಾರೆ.