3 ತಿಂಗಳಿಂದ ನಾಪತ್ತೆಯಾದ ಮಗ: ಪ್ರೀತಿಸಿದ ಯುವತಿ ಮನೆಯವರ ಮೇಲೆ ತಂದೆಯ ಅನುಮಾನ ಕಾರವಾರ: ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಯುವಕನೋರ್ವ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದು, ಹುಡುಕಿಕೊಡುವಂತೆ ಯುವಕನ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸಚಿನ್ ಸಿದ್ದಿ ನಾಪತ್ತೆಯಾದ ಯುವಕನಾಗಿದ್ದು, ತಂದೆ ಇಂದು ಅನಂತ್ ಸುಬ್ರಾಯ ಸಿದ್ದಿ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ನನ್ನ ಮಗ ಸಚಿನ್ ಸಿದ್ದಿ ಬೆಂಗಳೂರಿನಲ್ಲಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ. ಕಳೆದ ಕೆಲವು ವರ್ಷಗಳಿಂದ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ತಿಂಗಳ ಹಿಂದೆ ಆಕೆಯ ಮನೆಗೆ ಹೋಗಿ ಬರುವುದಾಗಿ ಹೇಳಿದವನು ಬಳಿಕ ನಾಪತ್ತೆಯಾಗಿದ್ದಾನೆ. ಯುವತಿ ಕುಟುಂಬದವರು ಹಾಗೂ ಸ್ನೇಹಿತರು ಜೀವಕ್ಕೆ ಅಪಾಯವುಂಟು ಮಾಡಿರುವ ಅನುಮಾನಗಳಿದೆ ಎಂದು ಹೇಳಿದರು.
ಅಲ್ಲದೆ ನನ್ನ ಮಗ ಕಾಣೆಯಾದಾಗ ಈ ವಿಷಯವನ್ನು ನಮಗೆ ತಿಳಿಸದೆ ಅವರೇ ಮೊದಲು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆದರೆ ಮಗನ ಸುಳಿವು ಸಿಗದ ಕಾರಣ ಅ.14 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾವು ದೂರು ದಾಖಲಿಸಿದ್ದೆವು. ಆದರೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಅಲ್ಲದೆ ಸಚಿನ್ ಹೆಚ್ಚಾಗಿ ಆ ಯುವತಿಯ ಮನೆಯಲ್ಲಿಯೇ ಇರುತ್ತಿದ್ದ. ಆತ ದುಡಿದ ಹಣವನ್ನು ಯುವತಿಯ ಮನೆಯವರಿಗೆ ಕೊಡುತ್ತಿದ್ದ. ಅಂತಿಮವಾಗಿ ಆತ ಆಕೆಯ ಮನೆಗೆ ಭೇಟಿ ನೀಡುವ ದಿನ ನಮಗೆ ಕರೆ ಮಾಡಿದ್ದಾನೆ. ಬಳಿಕ ಸಂಜೆ ವೇಳೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ :ಕನ್ಯೆ ಕೊಡುವವರೆಲ್ಲ ಸರ್ಕಾರಿ ನೌಕರಿನೇ ಇರಬೇಕೆಂದ್ರು.. ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ!?