ಕಾರವಾರ: ಬಿಇಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ಚಾಕ್ ಪೀಸ್ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ ಮಂಜುನಾಥ್ ನಾಯ್ಕ ಇಂತಹದ್ದೊಂದು ಸಾಧನೆ ಮಾಡಿದ ವಿದ್ಯಾರ್ಥಿ. ಮಂಜುನಾಥ್ ನಾಯ್ಕ ಹೊನ್ನಾವರದ ಎಸ್ಡಿಎಂ ಪದವಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಪ್ರಸ್ತುತ ಕಾರವಾರದ ಬಾಡದಲ್ಲಿರುವ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಶಿಕ್ಷಣ ಮುಂದುವರಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಯುವಕನ ಕಲೆ ಎರಡು ವರ್ಷಗಳಿಂದ ಚಾಕ್ ಪೀಸ್ನಲ್ಲಿ ಕೆತ್ತನೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡ ಪ್ರದೀಪ, ಮೊದ ಮೊದಲು ಇಂಗ್ಲಿಷ್ ಅಕ್ಷರಗಳನ್ನು ಕೆತ್ತುತ್ತಿದ್ದರು. ಬಳಿಕ ತನ್ನ ಗೆಳೆಯರು, ಭಗತ್ ಸಿಂಗ್, ಬುದ್ಧ, ಗಾಂಧೀಜಿ ಮುಂತಾದವರ ಹೆಸರುಗಳನ್ನು ಕೆತ್ತಿ ಗಮನ ಸೆಳೆದಿದ್ದರು.
ಇದನ್ನೂಓದಿ: ಏನೇ ಕೇಳಿದ್ರೂ ಥಟ್ ಅಂತ ಉತ್ತರ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಪೋರಿ
ಈ ನಡುವೆ ತನ್ನ ಕಲೆಯನ್ನು ಅಚ್ಚಾಗಿಸುವ ನಿಟ್ಟಿನಲ್ಲಿ 17 ಚಾಕ್ ಪೀಸ್ಗಳಲ್ಲಿ ಕೇವಲ 18 ಗಂಟೆಗಳ ಅವಧಿಯಲ್ಲಿ ರಾಷ್ಟ್ರಗೀತೆಯನ್ನು ರಚಿಸಿ ಇದೀಗ ತಮ್ಮ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗುವಂತೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರದೀಪ್, ಕಾಲೇಜಿನ ರಜಾ ಅವಧಿಯಲ್ಲಿ, ಅದರಲ್ಲೂ ತೌಕ್ತೆ ಚಂಡಮಾರುತದ ಸಮಯದಲ್ಲಿ ಆನ್ಲೈನ್ ಕ್ಲಾಸ್ ಇರಲ್ಲಿಲ್ಲ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕು ಎಂದು ಈ ಚಾಕ್ ಪೀಸ್ನಲ್ಲಿ ರಾಷ್ಟ್ರಗೀತೆ ಕೆತ್ತಿದೆ. ಅದೀಗ ದಾಖಲೆಯಾಗಿರುವುದು ಖುಷಿಯಾಗಿದೆ ಎಂದಿದ್ದಾನೆ.
ಪ್ರದೀಪ್ ಸಾಧನೆ ಇಷ್ಟು ಮಾತ್ರವಲ್ಲ. ಸಂಗೀತ, ತಬಲಾ, ಚಿತ್ರಕಲೆಯಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಪ್ರದೀಪ್ ಸಾಧನೆಗೆ ತಂದೆ ಮಂಜುನಾಥ್ ನಾಯ್ಕ್, ತಾಯಿ ಚಂದ್ರಕಲಾ, ಕುಟುಂಬದವರು, ಗುರುಗಳು ಹಾಗೂ ಸ್ನೆಹಿತರ ಬಳಗದಿಂದ ಅಭಿನಂದನೆಯ ಮಹಾಪುರವೇ ಹರಿದುಬರುತ್ತಿದೆ.