ಕಾರವಾರ :ಶಿಖರದಿಂದ ಸಾಗರದೆಡೆ ಯಾತ್ರೆ ಕೈಗೊಂಡಿರುವ ಐವರು ಕನ್ನಡತಿಯರು 5,425 ಮೀಟರ್ ಎತ್ತರದ ಕೊಲೈಪಿಕ್ ಹಿಮಶಿಖರ ಏರಿ ಲಡಾಖ್‌ನಿಂದ 3,350 ಕಿ.ಮೀ ಸೈಕ್ಲಿಂಗ್ ಮೂಲಕ ಕಾರವಾರ ತಲುಪಿದೆ. ಗುರುವಾರ ಕಾರವಾರದಿಂದ ಮಂಗಳೂರಿನವರೆಗೆ 300 ಕಿ.ಮೀ. ಕಯಾಕಿಂಗ್ ಮೂಲಕ ತೆರಳಲು ಸಜ್ಜಾಗಿದ್ದಾರೆ.
ಮೈಸೂರು ಮೂಲದ ಬಿಂದು ನೇತೃತ್ವದಲ್ಲಿ ಶಿಮೊಗ್ಗದ ಧನಲಕ್ಷ್ಮಿ, ಐಶ್ವರ್ಯಾ, ಬೆಂಗಳೂರಿನ ಆಶಾ, ಕೊಡಗು ಮೂಲದ ಪುಷ್ಪಾ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಷನ್, ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಸಹಕಾರದೊಂದಿಗೆ ಈ ಐವರು ಯುವತಿಯರು ಸಾಗರದಿಂದ ಶಿಖರದೆಡೆಗೆ ಯಾತ್ರೆ ಕೈಗೊಂಡಿದ್ದಾರೆ.
ಆ.17ರಂದು ಬೆಂಗಳೂರಿನಿಂದ ಹೊರಟು ಆ. 22ರಂದು ಕಾಶ್ಮೀರ ಬಳಿಯ 5,425 ಮೀಟರ್ ಎತ್ತರದ ಕೊಲೈಪಿಕ್ ಶಿಖರ ಏರಿದ್ದರು. ವಿಪರೀತ ಶೀತದ ಜೊತೆಗೆ ಉಸಿರಾಡುವುದಕ್ಕೂ ಕಷ್ಟದ ಸ್ಥಿತಿ ಈ ಪ್ರದೇಶದಲ್ಲಿತ್ತು. ಬಳಿಕ ಅಲ್ಲಿಂದ ಲಡಾಖ್‌ಗೆ ಆಗಮಿಸಿ ನಂತರ 3,350 ಕಿ.ಮೀ ಸೈಕ್ಲಿಂಗ್ ಮಾಡಿಕೊಂಡು ಬಂದು ಕಾರವಾರ ತಲುಪಿದ್ದೇವೆ.
ಸಾಕಷ್ಟು ಎತ್ತರದ ರಸ್ತೆಗಳನ್ನು ಏರಿ ಬಿಸಿಲು, ಮಳೆಯನ್ನು ಲೆಕ್ಕಿಸದೆ ಐವರು ಕೂಡ ಕಾರವಾರ ತಲುಪಿದ್ದೇವೆ. ಈ ವೇಳೆ ಸಾಕಷ್ಟು ರಾಜ್ಯಗಳನ್ನು ವಿಭಿನ್ನ ಸಂಸ್ಕೃತಿ, ಜನರನ್ನು ನೋಡಿದ್ದೇವೆ. ಶಿಖರ ಏರಿರುವುದು ಮತ್ತು ಸೈಕ್ಲಿಂಗ್ ಮಾಡಿರುವುದು ಎರಡು ಕೂಡ ಉತ್ತಮ ಅನುಭವ ನೀಡಿದೆ. ಇದೀಗ ಅರಬ್ಬೀ ಸಮುದ್ರದಲ್ಲಿ 300 ಕಿ.ಮೀ ಕಯಾಕಿಂಗ್ ಮೂಲಕ ಮಂಗಳೂರು ತಲುಪುವ ಗುರಿ ಹೊಂದಿದ್ದೇವೆ ಅಂತಾರೆ ಸಾಹಸಿ ಯುವತಿ ಬಿಂದು.