ಕಾರವಾರ: ನಗರಸಭಾ ಕಾರ್ಯಾಲಯದಿಂದ ಏಪ್ರಿಲ್ 5 ರಂದು ಮತ್ತು ಮೇ 9 ರಂದು ಸುಮಾರು 171 ವಿವಿಧ ಕಾಮಗಾರಿಗಳಿಗಾಗಿ ಎರಡು ಟೆಂಡರ್ಗಳನ್ನು ಕರೆಯಲಾಗಿತ್ತು. ಆದರೇ ಟೆಂಡರ್ ಕರೆದಿರುವ ಕಾಮಗಾರಿಗಳು ಈಗಾಗಲೇ ಬಹುತೇಕ ಮುಗಿದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ನಗರಸಭೆ ಆಯುಕ್ತರು ನಿಯಮಬಾಹಿರವಾಗಿ ಕೆಲಸವನ್ನು ಮಾಡಿದ್ದಾರೆಂದು ಆರೋಪಿಸಿ ಮಾಜಿ ಶಾಸಕ ಸತೀಶ್ ಸೈಲ್ ಕಾರ್ಯಾಲಯದಲ್ಲಿ ಧರಣಿ ಕುಳಿತಿದ್ದಾರೆ.
ಈ ಕುರಿತು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದ ಕಾಮಗಾರಿ ಮಾಡೋದಾದ್ರೂ ಸಂಬಂಧಪಟ್ಟ ಇಲಾಖೆ ಮೊದಲು ಅಗತ್ಯ ಟೆಂಡರ್ ಕರೆಯಬೇಕು. ಆ ಬಳಿಕವೇ ಕಾಮಗಾರಿಯನ್ನು, ಟೆಂಡರ್ನಲ್ಲಿ ಪಡೆದವರಿಗೆ ನೀಡಬೇಕು. ಆದರೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಮೊದಲೇ ನೂರಾರು ಕಾಮಗಾರಿಗಳನ್ನು ನಡೆಸಿ ಬಳಿಕ ಟೆಂಡರ್ ಕರೆದಿದೆ. ಕೇವಲ ಕಾಟಾಚಾರಕ್ಕಾಗಿ ಟೆಂಡರ್ ಕರೆದು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡಲಾಗಿದೆ ಎಂದು ಕಾರವಾರ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.