ಕರ್ನಾಟಕ

karnataka

ETV Bharat / state

ಸಾಗರ ಮತ್ಸ್ಯಾಲಯ ಸ್ಥಳಾಂತರ: ಕುಡುಕರ ಅಡ್ಡೆಯಾದ ಪಾಳು ಕೇಂದ್ರ - Sagar matsalaya Is Heaven For Drinkers

ಸಾಗರ ಮತ್ಸ್ಯಾಲಯವನ್ನು ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ದಶಕಗಳ ಕಾಲ‌ ಪ್ರವಾಸಿಗರ ಕಣ್ಮನ ಸೆಳೆದಿದ್ದ ಕೇಂದ್ರ ಇದೀಗ ಪಾಳು ಬಿದ್ದು ಕುಡುಕರ ಅಡ್ಡೆಯಾಗಿದೆ. ಈ ಬಗ್ಗೆ ಗಮನ ಹರಿಸಿ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Karwar  Sagar matsalaya
ಕುಡುಕರ ಅಡ್ಡೆಯಾದ ಸಾಗರ ಮತ್ಸ್ಯಾಲಯ

By

Published : Jun 17, 2022, 11:23 AM IST

ಕಾರವಾರ: ಅದು ಸಮುದ್ರದಾಳದ ಚಿತ್ರ ವಿಚಿತ್ರ ಜಲಚರಗಳ ವಿಸ್ಮಯ ತೆರೆದಿಡುತ್ತಿದ್ದ ಪ್ರಮುಖ ಪ್ರವಾಸಿ ಕೇಂದ್ರ. ಆದರೆ, ಇದೀಗ ಶಿಥಿಲಾವಸ್ಥೆ ತಲುಪಿ ಸಂಪೂರ್ಣವಾಗಿ ಬಾಗಿಲು ಮುಚ್ಚಿದೆ. ಫಿಶ್ ಅಕ್ವೇರಿಯಂಗಳನ್ನು ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ದಶಕಗಳ ಕಾಲ‌ ಪ್ರವಾಸಿಗರ ಕಣ್ಮನ ಸೆಳೆದಿದ್ದ ಕೇಂದ್ರ ಇದೀಗ ಪಾಳು ಬಿದ್ದು ಕುಡುಕರ ಅಡ್ಡೆಯಾಗಿದೆ.

ದಶಕಗಳ ಹಿಂದೆ ಇಲ್ಲಿನ ಟ್ಯಾಗೋರ್ ತೀರದಲ್ಲಿ ನವೀಕರಣಗೊಂಡ ಕಟ್ಟಡದಲ್ಲಿ ಆರಂಭಗೊಂಡ 'ಸಾಗರ ಮತ್ಸ್ಯಾಲಯ'ದಿಂದ ಪ್ರವಾಸಿಗರಿಗೆ ಕಡಲಾಳದ ಅಪರೂಪದ ಜೀವಿಗಳನ್ನ ಪರಿಚಯಿಸುವ ಕಾರ್ಯ ನಡೆಯುತ್ತಿತ್ತು. ಪ್ರವಾಸಿಗರ ಮೂಲಕ ಜಿಲ್ಲಾಡಳಿತಕ್ಕೂ ಆದಾಯದ ಮೂಲವಾಗಿತ್ತು. ಆದರೆ, ಸಾಗರ ಮತ್ಸ್ಯಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕಟ್ಟಡ ನವೀಕರಣಗೊಂಡ ಕೇವಲ‌ 10 ವರ್ಷದಲ್ಲಿಯೇ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.‌ ಸದ್ಯ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅದನ್ನು ಶಾಶ್ವತವಾಗಿ ಮುಚ್ಚಲಾಗಿದೆ.

ಕುಡುಕರ ಅಡ್ಡೆಯಾದ ಸಾಗರ ಮತ್ಸ್ಯಾಲಯ: ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಸಾರ್ವಜನಿಕರ ಆಗ್ರಹ

ಆದರೆ, ಈ ಕೇಂದ್ರ ಸದ್ಯ ಕುಡುಕರ ಅಡ್ಡೆಯಾಗಿದೆ. ದೇಶ ವಿದೇಶಗಳಲ್ಲಿ ಅಕ್ವೇರಿಯಂಗಳಿಂದಲೇ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದರೂ ನಮ್ಮಲ್ಲಿ ಮಾತ್ರ ಮೂಲೆಗುಂಪು ಮಾಡಲಾಗಿದೆ. ಕೂಡಲೇ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕೂಡ ಈಗಿರುವಂತೆ ಸಾಗರ ಮತ್ಸ್ಯಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸದ್ಯ ಮತ್ಸ್ಯಾಲಯವನ್ನು ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮತ್ಸ್ಯಾಲಯದಲ್ಲಿನ ಪಾನಿಸ್ ಕೋಯ್, ಸ್ಮಾಲ್ ಕೋಯ್, ಗೋಲ್ಡನ್ ರೋಸಿ, ಡೈಮಂಡ್ ಆ್ಯಂಗಲ್, ಗೋಲ್ಡ್ ಫಿಶ್, ಕಾಪರ್ ಗೋಲ್ಡ್, ಅಲ್ಬಿನೊ ಶಾರ್ಕ್, ವೈಟ್ ಮೂಲೀಸ್, ಬ್ಲಾಕ್ ಮಾರ್ಫ್ ಹೀಗೆ 30ಕ್ಕೂ ಹೆಚ್ಚು ವಿಧದ ಮೀನುಗಳು, ಆಮೆಗಳ ಮರಿಗಳು ಗಮನ ಸೆಳೆಯುತ್ತಿವೆ.

ತಿಮಿಂಗಿಲದ ಅಸ್ತಿ ಸಂರಕ್ಷಣೆ: ಅಲ್ಲದೇ, ಇಲ್ಲಿ ಹಲವು ವರ್ಷಗಳ ಹಿಂದಿನ ತಿಮಿಂಗಿಲದ ಅಸ್ತಿಯನ್ನು ಕೂಡ ಸಂರಕ್ಷಿಸಿಡಲಾಗಿದೆ. ಇದು ಕೂಡ ಪ್ರವಾಸಿಗರ ಕೌತುಕ ಹೆಚ್ಚಿಸಿದೆ. ವಿಜ್ಞಾನ ಕೇಂದ್ರದಲ್ಲಿ ಈಗಾಗಲೇ ಸಾಕಷ್ಟು ವಿಜ್ಞಾನ ಮಾದರಿಗಳನ್ನು ಅಳವಡಿಸಲಾಗಿದ್ದು, ಇವುಗಳ ಜತೆಗೆ ಅಕ್ವೇರಿಯಂಗಳನ್ನು ಇಡಲಾಗಿದೆ. ವೈಜ್ಞಾನಿಕ ಶಿಬಿರ, ಚಟುವಟಿಕೆಗಳು, ತರಬೇತಿ ಕಾರ್ಯಕ್ರಮಗಳ ಜೊತೆಗೆ ಮತ್ಸ್ಯಾಲಯವೂ ಇಲ್ಲಿರುವುದರಿಂದ ಎಲ್ಲವನ್ನು ಒಂದೆಡೆ ನೋಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ದುಃಸ್ಥಿತಿಯ ಹಂತ ತಲುಪಿದ, ದಶಕಗಳ ಇತಿಹಾಸದ ಸಾಗರ ಮತ್ಸ್ಯಾಲಯ ಶಾಶ್ವತವಾಗಿ ಮುಚ್ಚಿರುವುದರಿಂದ ಬೇಸರಗೊಂಡಿದ್ದವರಿಗೆ ಈಗ ವಿಜ್ಞಾನ ಕೇಂದ್ರದಲ್ಲಿ ವಿವಿಧ ಬಗೆಯ ಮೀನುಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ, ಪಾಳು ಬಿದ್ದಿರುವ ಕಟ್ಟಡ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು. ಈ ಬಗ್ಗೆ ಗಮನ ಹರಿಸಿ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಿದೆ.

ABOUT THE AUTHOR

...view details