ಕರ್ನಾಟಕ

karnataka

ರಿಯಾಯಿತಿ ದರದಲ್ಲಿ ಗೃಹ ಬಳಕೆ ವಸ್ತು ನೀಡುವುದಾಗಿ ವಂಚನೆ: ಕಾರವಾರದಲ್ಲಿ ಆರೋಪಿ ಅಂದರ್​

ಗೃಹ ಬಳಕೆ ವಸ್ತುಗಳ ಹೆಸರಿನಲ್ಲಿ ವಂಚಿಸಿ ಪರಾರಿಯಾಗಿದ್ದ ಆರೋಪಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

By

Published : Mar 22, 2021, 6:27 PM IST

Published : Mar 22, 2021, 6:27 PM IST

Karwar Police arrested Fraud case accused
ಗೃಹಪಯೋಗಿ ವಸ್ತುಗಳ ಹೆಸರಿನಲ್ಲಿ ವಂಚನೆ ಪ್ರಕರಣ

ಕಾರವಾರ : ರಿಯಾಯಿತಿ ದರದಲ್ಲಿ ಗೃಹಬಳಕೆ ವಸ್ತುಗಳನ್ನು ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ಪಂಗನಾಮ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಣ ಕಳೆದುಕೊಂಡವರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಾರವಾರದಲ್ಲಿ ಕಂಪನಿ ತೆರೆದು ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ಗ್ರಾಹಕರಿಗೆ ನಂಬಿಸಿ ಮುಂಗಡ ಹಣ ಪಡೆದು ಪರಾರಿಯಾಗಿದ್ದ ತಮಿಳುನಾಡು ಮೂಲದ ಶಿವರಾಜ ರೆಂಗರಸು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕಾಜುಭಾಗದ ಬಳಿ ತಿಂಗಳ ಹಿಂದೆ ಅಮೋಘ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಅಂಗಡಿ ತೆರೆದಿದ್ದ ಈತ, ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವುದಾಗಿ ಗ್ರಾಹಕರಿಗೆ ನಂಬಿಸಿದ್ದ. ಉತ್ತಮ ಗುಣಮಟ್ಟದ ವಸ್ತುಗಳನ್ನು ಮುಂಗಡ ಹಣ ನೀಡಿದರೆ ಶೇ.‌45 ರಷ್ಟು ರಿಯಾಯಿತಿ ದರದಲ್ಲಿ ನೀಡುವುದಾಗಿ ತಿಳಿಸಿ, ಇದು ಕಂಪನಿಯ ಪ್ರಚಾರಕ್ಕಾಗಿ ರಿಯಾಯಿತಿ ನೀಡುವುದಾಗಿಯೂ ನಂಬಿಸಿದ್ದ.

ಓದಿ : ‘ವಂಚಕರ’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ.. ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲು

ಅದರಂತೆ, ಆರೋಪಿ ಮಾತಿಗೆ ಮರುಳಾದ ಕಾರವಾರ ಭಾಗದ ಗ್ರಾಹಕರು ಮನೆ, ಮದುವೆಗೆ, ಉಡುಗೊರೆ ನೀಡಲು ಸುಮಾರು 12 ಲಕ್ಷ ರೂ. ಮುಂಗಡ ಹಣ ನೀಡಿದ್ದರು. ಆದರೆ, ಆರೋಪಿ ಶಿವರಾತ್ರಿ ಮುನ್ನಾದಿನ ಮನೆ, ಅಂಗಡಿ ಖಾಲಿ ಮಾಡಿ ಸ್ಥಳೀಯವಾಗಿ ಕೆಲಸಕ್ಕೆ ನೇಮಿಸಿಕೊಂಡವರಿಗೂ ಸಂಬಳ ನೀಡದೆ ಪರಾರಿಯಾಗಿದ್ದ.

ಅಂಗಡಿ ಬಂದ್​ ಆಗಿ ಮಾಲೀಕ ನಾಪತ್ತೆಯಾಗಿರುವುದನ್ನು ತಿಳಿದ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದರು. ಕೊನೆಗೆ ಈ ಬಗ್ಗೆ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಸಂತೋಷ್ ಶೆಟ್ಟಿ ನೇತೃತ್ವದ ಪಿಎಸ್ಐ ಸಂತೋಷ ಅವರನ್ನೊಳಗೊಂಡ ತಂಡ, ಆರೋಪಿ ಹುಬ್ಬಳ್ಳಿಯಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು. ಸದ್ಯ, ಆತನನ್ನು ಬಂಧಿಸಲಾಗಿದ್ದು, ತಂಡದಲ್ಲಿದ್ದ ಇನ್ನೂ ಐವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಗ್ರಾಹಕರಿಗೆ ಟೋಪಿ ಹಾಕಿ ಪರಾರಿಯಾಗಲು ಯತ್ನಿಸಿದ್ದ ತಮಿಳುನಾಡು ಆಸಾಮಿಗಳ ಪ್ಲಾನ್ ಅನ್ನು ಕಾರವಾರದ ನಾಗರಿಕರು ಮತ್ತು ಮಾಧ್ಯಮದವರು ಬಯಲು ಮಾಡಿದ್ದಾರೆ. ಓರ್ವ ಆರೋಪಿ ಸಿಕ್ಕಿದ್ದು, ಇನ್ನೂ ಐವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇನ್ಮುಂದೆ ಗ್ರಾಹಕರು ಕಡಿಮೆ ದರದ ಆಸೆಗೆ ಹಣ ತೊಡಗಿಸಿ ಮೋಸ ಹೋಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮನವಿ ಮಾಡಿದ್ದಾರೆ.

ABOUT THE AUTHOR

...view details