ಕಾರವಾರ: ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಬಳಿ ಕಾರನ್ನು ಅಡ್ಡಗಟ್ಟಿ ಕಾರು ಸಮೇತ 2.11 ಕೋಟಿ ರೂ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ದರೋಡೆಕೋರರನ್ನು ಪತ್ತೆ ಮಾಡುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡಿನ ಮಹ್ಮದ್ ಕಬೀರ್ ಮೈನುದ್ದೀನ್ ಹಾಜಿ, ಪಾಲಕ್ಕಾಡ್ ಜಿಲ್ಲೆಯ ಕೋಜಿಕೋಡಿಯ ಸುಭಾಸ್ ರಾಧಾಕೃಷ್ಣನ್, ಪಾಲಕ್ಕಾಡ್ ಜಿಲ್ಲೆಯ ಐಲೂರಿನ ಸಕಯ್ಯಪ್ಪನಚೇರಿಯ ನಿಮೇಶ ವಿಜಯ ಕೃಷ್ಣನ್ ಪ್ರಕರಣದ ಬಂಧಿತ ಆರೋಪಿಗಳು.
ಅ.2 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ ನಿಲೇಶ ಪಾಂಡುರಂಗ ನಾಯ್ಕ ಅವರ ಕಾರನ್ನು 7-8 ಜನರ ತಂಡ ಅಡ್ಡಗಟ್ಟಿತ್ತು. ಅವರ ಮೇಲೆ ಹಲ್ಲೆ ಮಾಡಿ ಸುಮಾರು ಕಾರು ಹಾಗೂ ಕಾರಿನಲ್ಲಿದ್ದ 2.11 ಕೋಟಿ ರೂಪಾಯಿ ಹಣವನ್ನು ಹಾಗೂ ಸುಮಾರು 10,000 ರೂಪಾಯಿ ಬೆಲೆ ಬಾಳುವ ಎರಡು ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿದ್ದರು. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೇರಳ ರಾಜ್ಯದ ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹಿಂದ್ರಾ ಮೊರೆಜೋ ಕಾರು, ಮಾರುತಿ ಬ್ರೆಝಾ ಹಾಗೂ ದರೋಡೆ ಮಾಡಿಕೊಂಡು ಹೋದ ಸ್ವೀಪ್ ವಿ.ಡಿ.ಐ ಕಾರ್ ಹಾಗೂ 98 ಸಾವಿರ ರೂ ಹಣ ಸೇರಿದಂತೆ ಒಟ್ಟು 19.98 ಲಕ್ಷ ಬೆಲೆಯ ಸ್ವತ್ತನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹೋಟೆಲ್ನಲ್ಲಿ ಬೀಫ್ ಬಿರಿಯಾನಿ ಮಾರಾಟ ಆರೋಪ: ಪೊಲೀಸ್ ಜೊತೆ ಹಿಂಜಾವೇ ದಾಳಿ