ಕಾರವಾರ:ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನಗತ್ಯವಾಗಿ ವಾಹನಗಳು ರಸ್ತೆಗಿಳಿಯದಂತೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಪಾಸ್ ಹಿಡಿದು ಓಡಾಡುವ ನೌಕಾನೆಲೆ ಸಿಬ್ಬಂದಿಯನ್ನು ಸಂಬಾಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಕೆಲಸ ಮಾಡುವ ಸಾವಿರಾರು ಜನ ಪಾಸ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಇದರಿಂದ ಬೆಳಗಿನ ಹೊತ್ತು ರಸ್ತೆಯಲ್ಲಿ ವಾಹನ ದಟ್ಟಣೆಯಾಗುತ್ತಿದೆ. ಪಾಸ್ ಇರುವುದರಿಂದ ನೌಕಾನೆಲೆ ಸಿಬ್ಬಂದಿಗೆ ಓಡಾಡಲು ಅವಕಾಶ ಇದೆ. ಆದರೆ, ಎಲ್ಲರ ಪಾಸ್ ಪರಿಶೀಲಿಸಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗುತ್ತಾರೆ. ಇನ್ನು, ಕೆಲ ವಾಹನಗಳಲ್ಲಿ ಮಿತಿ ಮೀರಿ ಜನರನ್ನು ತುಂಬಿಕೊಂಡು ಹೋಗಲಾಗ್ತಿದೆ. ಪಾಸ್ ಇರುವುದರಿಂದ ಇವರನ್ನು ತಡೆಯಬೇಕೋ, ಬಿಡಬೇಕೋ ಎಂಬ ಗೊಂದಲದಲ್ಲಿ ಪೊಲೀಸರು ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುದರಿಂದ ಬಾಯಿ ಮಾತಿಗೆ ಮಾತ್ರ ಲಾಕ್ಡೌನ್ ಎಂಬಂತಾಗಿದೆ.
ಪೊಲೀಸರಿಗೆ ತಲೆನೋವಾದ ನೌಕಾನೆಲೆ ಸಿಬ್ಬಂದಿ ಏಷ್ಯಾದ ಅತಿ ದೊಡ್ಡ ನೌಕಾನೆಲೆ ಎನಿಸಿಕೊಂಡಿರುವ ಸೀಬರ್ಡ್ ನೌಕಾನೆಲೆಯಲ್ಲಿ ಲಾಕ್ಡೌನ್ ನಡುವೆ ಹಲವು ಕಾಮರಿಗಳು ನಡೆಯುತ್ತಿವೆ. ಎಲ್ಎಂಡಿ, ನವಯುಗ, ಐಟಿಡಿಸಿ, ನಾರ್ಗಾಜುನ ಸೇರಿದಂತೆ ಹಲವು ಕಂಪನಿಗಳು ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿವೆ. ಒಂದೊಂದು ಕಂಪನಿಯಲ್ಲೂ ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಇವರೆಲ್ಲರೂ ಪಾಸ್ ಹಿಡಿದುಕೊಂಡು ಓಡಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.
ಇನ್ನು, ನೌಕಾನೆಲೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸದ ವೇಳೆ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಲೇಬರ್ ಕ್ಯಾಂಪ್ಗಳಲ್ಲಿ ಕೆಲವರಿಗೆ ಕೋವಿಡ್ ಲಕ್ಷಣಗಳಿದ್ದರೂ ನಿಷ್ಕಾಳಜಿ ವಹಿಸಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ಒಂದೆರಡು ಬಾರಿ ಲೇಬರ್ ಕ್ಯಾಂಪ್ಗಳಿಗೆ ತೆರಳಿ ಪರಿಶೀಲನೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದೇವೆ ಎಂದು ಹೇಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳು ಕಂಟೇನ್ಮೆಂಟ್ ಝೋನ್ಗಳಾಗಿವೆ. ಕಾರವಾರ ನಗರ ಕೂಡ ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಬರುವುದರಿಂದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ನೌಕಾನೆಲೆ ಸಿಬ್ಬಂದಿ ಓಡಾಡುತ್ತಿರುವುದರಿಂದ ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ.