ಕಾರವಾರ:ತಣ್ಣಗಿದ್ದ ಕಾರವಾರದಲ್ಲಿ ಭಾಷಾ ವಿವಾದಕ್ಕೆ ಸ್ಥಳೀಯ ನಗರಸಭೆ ಎಡೆಮಾಡಿಕೊಟ್ಟಿದೆ. ಕಾರವಾರ ನಗರ ವ್ಯಾಪ್ತಿಯ ವಾರ್ಡ್ಗಳ ನಾಮಫಲಕಗಳನ್ನು ಕನ್ನಡದ ಜೊತೆಗೆ ಕೊಂಕಣಿ-ಮರಾಠಿ ಅರ್ಥ ಬರುವಂತೆ ಹಿಂದಿಯಲ್ಲಿ ಬರೆಯಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಾಗಲೇ ಹಿಂದಿ ಹೇರಿಕೆಯ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿದೆ. ಇದರ ಜೊತೆಗೆ ಕೊಂಕಣಿ-ಮರಾಠಿ ಭಾಷಿಗರಿರುವ ಕಾರವಾರ, ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಆಗಾಗ ಮಹಾರಾಷ್ಟ್ರದ ನಾಯಕರುಗಳು ತಕರಾರು ತೆಗೆಯುತ್ತಿರುತ್ತಾರೆ. ಮತ್ತೊಂದೆಡೆ ಗೋವಾದ ಕೊಂಕಣಿ ಮಂಚ್ ಕೂಡ ಜೊಯಿಡಾ, ಕಾರವಾರವನ್ನು ಗೋವಾದೊಂದಿಗೆ ಸೇರಿಸಿಕೊಳ್ಳಲು ಹವಣಿಸುತ್ತಿದೆ. ಇಷ್ಟಾದರೂ ಸುಮ್ಮನಿದ್ದ ಕಾರವಾರದ ಕನ್ನಡಿಗರನ್ನು ಇದೀಗ ಕಾರವಾರ ನಗರಸಭೆಯ ಒಂದೇ ಒಂದು ನಡೆ ಬಡಿದೆಬ್ಬಿಸುವಂತೆ ಮಾಡಿದೆ.
ನಗರದಲ್ಲಿ ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳ ಭಾಗವೇ ಆಗಿ ನಗರ ವ್ಯಾಪ್ತಿಯ ವಾರ್ಸ್ಗಳ ಹೆಸರುಗಳ ನಾಮಫಲಕಗಳನ್ನು ಹೊಸದಾಗಿ ಬರೆಯಿಸಲಾಗಿದೆ. ಆದರೆ, ಕನ್ನಡದ ಜೊತೆಗೆ ಹಿಂದಿಯನ್ನೂ ಬಳಸಿರುವುದು ಹಿಂದಿ ಹೇರಿಕೆ ವಿವಾದಕ್ಕೆ ಕಾರಣವಾದರೆ, ಕನ್ನಡದ ಹೆಸರುಗಳನ್ನ ಕೊಂಕಣಿ-ಮರಾಠಿಗೆ ತರ್ಜುಮೆ ಮಾಡಿ ಹಿಂದಿಯಲ್ಲಿ ಬರೆದಿರುವುದು ಎಂಇಎಸ್, ಕೊಂಕಣಿ ಮಂಚ್ಗಳಿಗೆ ಸಾಥ್ ನೀಡುವ ಕಾರ್ಯವೆಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಕರುನಾಡ ರಕ್ಷಣಾ ವೇದಿಕೆ, ಜನಶಕ್ತಿ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಕಾರ್ಯಕರ್ತರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದು, ನಗರಸಭೆಯ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾರವಾರ ಬೆಳೆಯುತ್ತಿರುವ ನಗರವಾಗಿರುವ ಕಾರಣ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಕೇವಲ ಕನ್ನಡದಲ್ಲಿದ್ದರೆ ಅರ್ಥ ಆಗುವುದಿಲ್ಲ ಎಂಬ ಕಾರಣಕ್ಕೆ ಹಿಂದಿಯಲ್ಲೂ ಬರೆಯಿಸಲಾಗಿದೆ ಎಂಬುದು ನಗರಸಭೆಯ ವಾದ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, "ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂಬ ಸರ್ಕಾರದ ನಿಯಮವಿದೆ. ಕನ್ನಡದ ಜೊತೆಗೆ ಬೇರೆ ಭಾಷೆ ಬಳಸಬಾರದು ಎಂದು ಎಲ್ಲಿಯೂ ಇರುವುದು ನನ್ನ ಗಮನಕ್ಕಿಲ್ಲ. ಈ ಬಗ್ಗೆ ಲಿಖಿತವಾಗಿ ಸ್ಪಷ್ಟನೆ ನೀಡಲು ನಗರಸಭೆಗೆ ತಿಳಿಸಿದ್ದೇನೆ" ಎಂದು ತಿಳಿಸಿದ್ದಾರೆ.