ಕಾರವಾರ: ಸರ್ಕಾರ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೂ ಕೂಡ ಕೆಲ ನಗರಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಅದರಲ್ಲೂ ಇ-ತ್ಯಾಜ್ಯ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಆದರೆ ಇಲ್ಲೊಂದು ನಗರ ರಾಜ್ಯದಲ್ಲೇ ಮೊದಲ ಬಾರಿಗೆ ಇ-ವೇಸ್ಟೇಜ್ ಸಂಗ್ರಹಕ್ಕೆ ಮುಂದಾಗಿದ್ದು ಒಂದು ಹೆಜ್ಜೆ ಸ್ವಚ್ಛತೆಯಕಡೆ ಎನ್ನುವ ಘೋಷವಾಕ್ಯದೊಂದಿಗೆ ಇತರೆ ನಗರಗಳಿಗೂ ಮಾದರಿಯಾಗುವ ಕೆಲಸಕ್ಕೆ ಮುಂದಾಗಿದೆ.
23ಕ್ಕೂ ಅಧಿಕ ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನು ಇ-ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನ ಬಳಕೆ ಮಾಡಿದ ನಂತರ ಹಾಗೆಯೇ ಎಸೆದುಬಿಡುತ್ತಾರೆ. ಇದರಿಂದ ಅವುಗಳಲ್ಲಿನ ಆರ್ಸೆನಿಕ್, ಪಾದರಸ, ಕ್ಯಾಡಿಯಂನಂಥ ಭಾರ ಲೋಹಗಳು ಜಲಮೂಲ ಮತ್ತು ಮಣ್ಣು ಸೇರಿ ಪರಿಸರ ಮಾಲಿನ್ಯವಾಗುತ್ತದೆ. ಇವುಗಳ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.