ಕಾರವಾರ :ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಪರಿಸರದ ಸೌಂದರ್ಯ, ನಗರದ ಸ್ವಚ್ಚತೆಯನ್ನು ಹಾಳುಗೆಡವುತ್ತಿವೆ. ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು ಅತಿಯಾಗಿ ತ್ಯಾಜ್ಯವಾಗಿ ಬಿಸಾಡಲ್ಪಡುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ. ತ್ಯಾಜ್ಯವನ್ನು ಕಂಡರೆ ಮೂಗು ಮುಚ್ಚಿಕೊಳ್ಳುವ ಕಾಲದಲ್ಲಿ ಇಲ್ಲೊಂದು ಕಚೇರಿಯಲ್ಲಿ ತ್ಯಾಜ್ಯಗಳನ್ನೇ ಬಳಸಿ ಕಚೇರಿ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.
ಕಣ್ಮನ ಸೆಳೆಯುವ ತರಹೇವಾರಿ ಅಲಂಕಾರಿ ವಸ್ತುಗಳು ತಯಾರಾಗಿದ್ದು ತ್ಯಾಜ್ಯ ವಸ್ತುಗಳಿಂದ ಅಂದ್ರೆ ನಂಬೋಕೆ ಸಾಧ್ಯಾನಾ. ಹೌದು ತ್ಯಾಜ್ಯ ವಸ್ತುಗಳನ್ನು ಈ ರೀತಿಯಲ್ಲೂ ಮರುಬಳಕೆ ಮಾಡಿಕೊಳ್ಳಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ನಗರಸಭೆ. ನಗರದಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ನಗರಸಭೆ ಸಿಬ್ಬಂದಿ ಸಂಗ್ರಹಿಸಿದ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗೃಹ ಬಳಕೆಯಿಂದ ಬರುವ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ಕಲಾಕೃತಿ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗಿದೆ.
ಕಸದಿಂದ ಕಲಾಕೃತಿ : ಈ ಕಲಾಕೃತಿಗಳನ್ನು ನಗರಸಭೆ ಆವರಣದಲ್ಲಿ ಇರಿಸಲಾಗಿದ್ದು ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಭಾರತ ಸರಕಾರದ ನಿರ್ದೇಶನದಂತೆ ಕೇಂದ್ರ ನಗರೋತ್ಥಾನ ಯೋಜನೆಯಡಿ ದೇಶದ ನಗರಸಭೆಗಳಿಗೆ ಟೈಕೋತಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಹಿನ್ನಲೆ ಕಸದಿಂದ ರಸ ಎನ್ನುವ ಮಾದರಿಯಲ್ಲಿ ನಿರುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲಾಗಿದೆ.
ಗೃಹಾಲಂಕಾರ ವಸ್ತುಗಳ ನಿರ್ಮಾಣ : ಇನ್ನು ನಗರಗಳಲ್ಲಿ ಪ್ರತಿನಿತ್ಯ ಸಂಗ್ರಹಿಸುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಾದ ಬಾಟಲ್, ಮುಚ್ಚಳ, ಚಮಚ, ಪೈಪ್, ಟಯರ್, ಆಯಿಲ್ ಕ್ಯಾನ್, ರಟ್ಟು, ಪ್ಲಾಸ್ಟಿಕ್ ಲೋಟ ಹಾಗೂ ದಾರವನ್ನು ಈ ಅಲಂಕಾರಿಕ ವಸ್ತು ತಯಾರಿಕೆಯಲ್ಲಿ ಬಳಸಲಾಗಿದೆ. ಇವುಗಳಿಂದ ಹೂವಿನ ಕುಂಡ, ಕುರ್ಚಿ, ಹ್ಯಾಂಗಿಂಗ್ ಪಾಟ್, ಕಸದ ತೊಟ್ಟಿ ಸೇರಿದಂತೆ ಅನೇಕ ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗಿದೆ.