ಕಾರವಾರ:ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆ ಕಳೆದ ಕೆಲ ವರ್ಷಗಳಿಂದ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಆರೋಪ ಮತ್ತು ಪ್ರತ್ಯಾರೋಪಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಆದರೆ ಕಾರವಾರ ನಗರಸಭೆಯೊಂದರಲ್ಲಿ ಕಳೆದ ಅವಧಿಯಲ್ಲಿ ಹಣವೇ ಇಲ್ಲದಿದ್ದರೂ ನಡೆಸಿದ ಕೋಟ್ಯಂತರ ರೂಪಾಯಿ ಕಾಮಗಾರಿಗಳಿಂದಾಗಿ ಇದೀಗ ಗುತ್ತಿಗೆದಾರರಿಗೆ ಮಾತ್ರವಲ್ಲದೆ ನಗರಸಭೆ ವಾಹನಗಳಿಗೆ ಡೀಸೆಲ್ ತುಂಬಿಸುವುದಕ್ಕೂ ಹಣವಿಲ್ಲದ ಸ್ಥಿತಿ ಉಂಟಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯಲ್ಲಿ ಇಂತಹ ಸ್ಥಿತಿ ಎದುರಾಗಿದೆ. ನಗರಸಭೆಯಲ್ಲಿ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಡಲಾಗಿತ್ತು. ಇದರ ಪರಿಣಾಮ ಪೂರ್ಣಗೊಂಡ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಬಿಲ್ ಪಾವತಿಗೆ ನಗರಸಭೆ ಪರದಾಡುತ್ತಿದೆ. ಕಳೆದ ಕೆಲ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳು, ಅಂಗಡಿಗಳು ಹಾಗೂ ಮನೆಗಳಿಂದ ತೆರಿಗೆ ಸಂಗ್ರಹ ಕಾರ್ಯ ಸರಿಯಾಗಿ ಆಗದ ಪರಿಣಾಮ ನಗರಸಭೆಯ ಆದಾಯ ಕುಂಠಿತವಾಗಿದೆ.
ಬಾಕಿ ಹಣ ಪಾವತಿಗೆ ಆಗ್ರಹ:ಇದೀಗ ನಗರಸಭೆಯ ಕಸ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳ ಇಂಧನ ಹಾಕಿಸಲೂ ಸಹ ಹಣವಿಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಬಂಕ್ ಮಾಲೀಕರು ಹಣವಿಲ್ಲದೇ ಇಂಧನ ನೀಡಲು ನಿರಾಕರಿಸಿದ್ದಾರೆ. ನಗರಸಭೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ 11 ಕೋಟಿ ರೂ ಪಾವತಿಸಬೇಕಾಗಿದೆ. ಬೀದಿ ದೀಪ ನಿರ್ವಹಣೆ ಬಿಲ್ ಕೂಡ ಬಾಕಿ ಇದೆ. ಕೂಡಲೇ ಬಾಕಿ ಹಣ ಪಾವತಿಗೆ ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದರು.