ಕಾರವಾರ (ಉತ್ತರ ಕನ್ನಡ): ಬ್ಲಾಕ್ ಚೈನ್ ಟೆಕ್ನಾಲಜಿ ಮತ್ತು ಕ್ರಿಪ್ಟೊ ಕರೆನ್ಸಿ ನಿಯಂತ್ರಣದಲ್ಲಿ ಪರಿಣಿತಿ ಪಡೆದಿರುವ ಕರಾವಳಿ ನಗರಿ ಕಾರವಾರ ಮೂಲದ ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅತೀ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿ ಕಾರ್ಯಾಲಯದ ಉಪಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದು, ಇದು ಕುಟುಂಬಸ್ಥರ ಹರ್ಷಕ್ಕೆ ಕಾರಣವಾಗಿದೆ.
ಕಾರವಾರ ಜಿಲ್ಲಾಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿ.ಪಿ.ಹೆಗಡೆ ಕಟ್ಟೆ ಹಾಗೂ ಸರಸ್ವತಿ ದಂಪತಿ ಪುತ್ರನಾಗಿದ್ದು, ತಮ್ಮ 33ನೇ ವಯಸ್ಸಿನಲ್ಲಿಯೇ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಕಾರವಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ಅವರು, ಹುಬ್ಬಳ್ಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಚಿನ್ನದ ಪದಕದೊಂದಿಗೆ ಮುಗಿಸಿದ್ದರು.
ಇನ್ನು ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅವರ ಬ್ಲಾಕ್ ಚೈನ್ ಟೆಕ್ನಾಲಜಿ ಹಾಗೂ ಕ್ರಿಪ್ಟೊಕರೆನ್ಸಿ ನಿಯಂತ್ರಣದಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಅನಧಿಕೃತ ಹಣದ ಚಲಾವಣೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ನಿರಂತರ ಪರಿಣಾಮ ಬೀರುವುದನ್ನು ಮನಗಂಡ ಅವರು, ಇದರ ನಿಯಂತ್ರಣಕ್ಕೆ ನಿರಂತರ ಅಧ್ಯಯನ ನಡೆಸಿದ್ದರು. ಅದರಂತೆ ಕೆ.ವೈ. ಪ್ರೋಟೊಕಾಲ್ ಹಾಗೂ ಕೆ.ವೈ. ಇಂಡೆಕ್ಸ್ ಎಂಬ ವಿಧಾನಗಳನ್ನು ರೂಪಿಸಿದ್ದರು.