ಕಾರವಾರ: ನಗರದ ಟಾಗೋರ್ ಕಡಲ ತೀರದಲ್ಲಿ ಏಂಡಿ ಬಲೆಗೆ ಬೃಹತ್ ಕುರಡೆ ಮೀನೊಂದು ಸಿಕ್ಕಿದೆ. ಈ ಮೀನು ಖರೀದಿಗೆ ಗ್ರಾಹಕರು ಮುಗಿಬಿದ್ದ ಘಟನೆಯೂ ನಡೆಯಿತು. ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲ ವಾತಾವರಣವಿದೆ. ಹೀಗಾಗಿ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಬಿರುಸು ಪಡೆದಿದೆ. ಶನಿವಾರ ಉದಯ ಬಾನಾವಳಿ ಎನ್ನುವವರ ತಂಡ ಮೀನುಗಾರಿಕೆ ಮಾಡುವಾಗ ಈ ಮೀನು ಬಲೆ ಸೇರಿದೆ.
ಸಾಮಾನ್ಯವಾಗಿ ಏಂಡಿ ಬಲೆಗೆ ಸಣ್ಣ ಮೀನುಗಳು ಸೇರಿದಂತೆ ಏಡಿಗಳು ಸಿಗುತ್ತವೆ. ಆದರೆ ಅಪರೂಪವಾಗಿ ಸಿಗುವ ಕುರಡೆ ಮೀನು ಕಂಡು ಮೀನುಗಾರರು ಹರ್ಷ ವ್ಯಕ್ತಡಿಸಿದರು. ಬಲೆಗೆ ಸಿಕ್ಕ ಕುರಡೆ ಮೀನು 25 ಕೆ.ಜಿ ತೂಕವಿದೆ. ರುಚಿಕರವಾಗಿರುವ ಮೀನು ಖರೀದಿಗೆ ಸಮುದ್ರ ತೀರದಲ್ಲಿ ಗ್ರಾಹಕರು ಮುಗಿಬಿದ್ದರು. ಬಳಿಕ ಕೆ.ಜಿಗೆ 350 ರೂ.ಯಂತೆ ಮಾರಾಟ ಮಾಡಲಾಯಿತು.
ಇದನ್ನೂ ಓದಿ:ಭದ್ರಾ ಹಿನ್ನೀರಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ; 12 ಸಾವಿರ ರೂಪಾಯಿಗೆ ಸೇಲ್- ವಿಡಿಯೋ
ಮುಳ್ಳು ಹಂದಿ ಮರಿ ರಕ್ಷಣೆ:ನಗರದ ರೈಲ್ವೆ ವಸತಿ ಗೃಹ ಬಳಿಯ ಜನವಸತಿ ಪ್ರದೇಶದಲ್ಲಿ ಮುಳ್ಳು ಹಂದಿಯ ಮರಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು. ಒಂಟಿ ಮುಳ್ಳಹಂದಿಯ ಮರಿ ನೋಡಿದ ಸ್ಥಳೀಯರಾದ ಮಾದೇವ ಗೌಡ ಎಂಬವರು ಗೋಣಿ ಚೀಲದ ಮೂಲಕ ಹಿಡಿದು ಮನೆಗೆ ತಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಲಾಖೆ ಸಿಬ್ಬಂದಿ ಮುಳ್ಳು ಹಂದಿ ಮರಿ ರಕ್ಷಿಸಿ ಸುರಕ್ಷಿತ ಸ್ಥಳ ಸೇರಿಸಿದರು.