ಕಾರವಾರ: ಪ್ರತಿನಿತ್ಯ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಸೇವೆಯನ್ನು ಕೊಡುವ ಮೂಲಕ ಜನಸಾಮಾನ್ಯರ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಸಿಬ್ಬಂದಿಗೆ ವೇತನ ಸಿಗದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಬಳಿ ವೇತನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ವೇತನ ಸಿಗದೇ ಕಂಗಾಲಾದ ಆರೋಗ್ಯ ಸಿಬ್ಬಂದಿ ಕೊನೆಗೆ ಅಧಿಕಾರಿಗಳ ಬಳಿ ವೇತನ ನೀಡುವಂತೆ ಮನವಿ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ವಿವಿಧ 11 ತಾಲ್ಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಅಗಸ್ಟ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕೆಲಸ ಮಾಡಿಯೂ ವೇತನ ಸಿಗದಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಆರೋಗ್ಯ ಸಿಬ್ಬಂದಿ ಇಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಆಗಮಿಸಿದ್ದರು.
ಆದರೆ ಆರೋಗ್ಯಾಧಿಕಾರಿಗಳು ಬೆಳಗ್ಗೆಯಿಂದ ಸಭೆಯಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಸಿಬ್ಬಂದಿ ಕಚೇರಿ ಹೊರಗೆ ಬಿಸಿಲಿನಲ್ಲೇ ಕಾಯುತ್ತ ನಿಲ್ಲುವಂತಾಗಿತ್ತು. ಸಿಬ್ಬಂದಿಯಲ್ಲಿ ಬಹುತೇಕರು ಮಹಿಳೆಯರೇ ಇದ್ದು ಕುಟುಂಬ ನಿರ್ವಹಣೆಗೆ ವೇತನವನ್ನೇ ನಂಬಿಕೊಂಡಿದ್ದಾರೆ. ಇದೀಗ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆ ಜೀವನ ನಡೆಸುವುದು ಕಷ್ಟಕರವಾಗಿದ್ದು ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.