ಕಾರವಾರ:ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಂಬಾರವಾಡ ಪಂಚಾಯತ್ ವ್ಯಾಪ್ತಿಯ ಡೇರಿಯಾ ಅನ್ನೋ ಪುಟ್ಟ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಗಳು ನಡೆಯುತ್ತಿವೆ. ಈ ಶಾಲೆಯಲ್ಲಿ 18 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶಾಲೆಗೆ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನ ನೆಟ್ಟು ಪೋಷಣೆ ಮಾಡಬೇಕು.
ಶಾಲೆಯ ವ್ಯಾಪ್ತಿಯಲ್ಲಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಕಳೆದ 14 ವರ್ಷದಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ನೆಟ್ಟ ಮಾವು, ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿರುವುದಲ್ಲದೆ, ಶಾಲೆಯ ಅಂದವನ್ನು ಸಹ ಹೆಚ್ಚಿಸಿವೆ. ಶಾಲೆಯಲ್ಲಿ ಜೇನುಸಾಕಾಣಿಕೆ, ಗೆಡ್ಡೆ ಗೆಣಸು ಹಾಗೂ ತೋಟಗಾರಿಕಾ ಬೆಳೆಗಳನ್ನ ಸಹ ಬೆಳೆಯಲಾಗುತ್ತಿದೆ. ಇಲ್ಲಿ ಮಕ್ಕಳೇ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಾರೆ. ಜೊತೆಗೆ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಆರೈಕೆ ಹೇಗೆ ಮಾಡಬೇಕು ಅನ್ನೋದನ್ನ ತೋರಿಸಿಕೊಡುತ್ತಾರೆ.
ಕಳೆದ 14 ವರ್ಷಗಳ ಹಿಂದೆ ಈ ಶಾಲೆಗೆ ಶಿಕ್ಷಕರಾಗಿ ಆಗಮಿಸಿದ್ದ ಲೀಲಾದರ್ ಮೊಗೇರ್ ಅನ್ನೋರು ಮಕ್ಕಳಿಗೆ ಕೃಷಿ ಬಗ್ಗೆ ಪಾಠ ಮಾಡುವ ಹಾಗೂ ಶಾಲೆಯಲ್ಲಿ ಮಕ್ಕಳಿಂದಲೇ ತೋಟ ನಿರ್ಮಿಸುವ ಕಾರ್ಯವನ್ನು ಮೊದಲು ಪ್ರಾರಂಭಿಸಿದ್ದರು. ಅವರು ವರ್ಗಾವಣೆಯಾಗಿ 3 ವರ್ಷಗಳಾದರೂ ಇದುವರೆಗೂ ಯಾವುದೇ ಖಾಯಂ ಶಿಕ್ಷಕರನ್ನ ಈ ಶಾಲೆಗೆ ನೇಮಿಸಿಲ್ಲ. ಓರ್ವ ಅತಿಥಿ ಶಿಕ್ಷಕರಿಂದ ಮಾತ್ರ ಸದ್ಯ ಶಾಲೆ ನಡೆಯುತ್ತಿದೆ.