ಕರ್ನಾಟಕ

karnataka

ETV Bharat / state

ಸರ್ವಸ್ವವೂ ಕಳೆದುಕೊಂಡವರ ಬದುಕು ಬೀದಿಗೆ : ನೆರವಿನ ನಿರೀಕ್ಷೆಯಲ್ಲಿ ಪ್ರವಾಹ ಸಂತ್ರಸ್ತರು - ಉತ್ತರ ಕನ್ನಡ ಪ್ರವಾಹ

ಜುಲೈ 23 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಉಂಟಾದ ಪ್ರವಾಹದಿಂದ ಜನ ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪ್ರಸ್ತುತ ಗಂಜಿ ಕೇಂದ್ರಗಳಲ್ಲಿ ದಿನ ಕಳೆಯುತ್ತಿರುವ ಸಂತ್ರಸ್ತರು ಸರ್ಕಾರದ ಪರಿಹಾರವನ್ನು ಎದುರು ನೋಡುತ್ತಿದ್ದಾರೆ.

Flood Victims Facing problem
ಬೀದಿಗೆ ಬಿದ್ದ ಪ್ರವಾಹ ಸಂತ್ರಸ್ತರ ಬದುಕು

By

Published : Aug 9, 2021, 1:04 PM IST

ಕಾರವಾರ : ಕೊರೊನಾ ಆತಂಕದ ಸಂಕಷ್ಟದ ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಜನರ ಬದುಕು ತತ್ತರವಾಗಿದೆ. ಒಂದಲ್ಲ ಎರಡಲ್ಲ, ಮೂರು ಬಾರಿ ಪ್ರವಾಹವನ್ನು ಎದುರಿಸಿದ ಜನರು ತಮ್ಮದೆಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇರಲು ಸೂರಿಲ್ಲ, ಕಟ್ಟಿಕೊಳ್ಳಲು ಕೈಯಲ್ಲಿ ಕಾಸಿಲ್ಲ. ಉಟ್ಟ ಬಟ್ಟೆಯಲ್ಲೇ ಬಂದ ಜನರು, ಇದೀಗ ಕಾಳಜಿ ಕೇಂದ್ರದಲ್ಲಿ ಸರ್ಕಾರದ ನೆರವಿಗಾಗಿ ಕಾದು ಕುಳಿತಿದ್ದಾರೆ.

ಜುಲೈ 23 ರಂದು ಸುರಿದ ಭಾರಿ ಮಳೆಗೆ ಕಾರವಾರ ತಾಲೂಕಿನ ಗಂಗಾವಳಿ ನದಿ ತಟದ ಶಿರೂರು ಗ್ರಾಮದಲ್ಲಿ ಪ್ರವಾಹ ಉಂಟಾಗಿತ್ತು. ಗ್ರಾಮದ ಸುಮಾರು 300ಕ್ಕೂ ಅಧಿಕ ಮನೆಗಳು ಜಲಾವೃತವಾಗಿ, ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಎರಡೇ ದಿನದಲ್ಲಿ ನದಿಯ ಅಬ್ಬರ ಕಡಿಮೆಯಾಗಿ ನೀರು ಇಳಿಯಿತ್ತಾದರೂ, ನೀರಿನಲ್ಲಿ ಮುಳುಗಿದ್ದ ಕೆಲ ಮನೆಗಳು ಸಂಪೂರ್ಣ ಕುಸಿದು ಬಿದ್ದವು. ಇನ್ನೂ ಹಲವು ಮನೆಗಳು ವಾಸಿಸಲು ಯೋಗ್ಯವಲ್ಲದ ಸ್ಥಿತಿಗೆ ಬಂದಿದೆ.

ಬೀದಿಗೆ ಬಿದ್ದ ಪ್ರವಾಹ ಸಂತ್ರಸ್ತರ ಬದುಕು

ಮನೆ ಕಳೆದುಕೊಂಡ ಜನರು ಗ್ರಾಮದ ಸರ್ಕಾರಿ ಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಎಷ್ಟು ದಿನ ಅಂತ ಇಲ್ಲೇ ಉಳಿಯಲು ಸಾಧ್ಯ? ಮನೆಗೆ ಹೋಗೋಣವೆಂದರೆ, ಇದ್ದ ಮನೆ ಕುಸಿದು ಬಿದ್ದಿದೆ. ಹಾಗಾಗಿ, ಸಂಕಷ್ಟಕ್ಕೆ ಸಿಲುಕಿರುವ ಜನರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಓದಿ : ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆ.. ಜೀಪಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲೇ ತೆರಳಿದ ಸಚಿವ ಅಂಗಾರ!

ಗಂಗಾವಳಿ ಉಕ್ಕಿ ಹರಿದ ಪರಿಣಾಮ, ನದಿ ಪಾತ್ರದ ಶಿರೂರು, ಮಂಜಗುಣಿ, ಬೆಳಕೆ ಸೇರಿದಂತೆ ಹತ್ತಾರು ಗ್ರಾಮಗಳು ನೆರೆಯಿಂದ ನಲುಗಿ ಹೋಗಿವೆ. ಸತತ ಮೂರು ಭಾರಿ ಪ್ರವಾಹಕ್ಕೆ ತುತ್ತಾಗಿರುವ ಜನರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ವರ್ಷ ನೆರೆ ನಿಂತ ಬಳಿಕ ಸ್ವಲ್ಪ ಚೇತರಿಸಿಕೊಳ್ಳುವಾಗಲೇ ಮುಂದಿನ ವರ್ಷ ಮತ್ತೆ ನೆರೆ ಬರುತ್ತದೆ. ಹಾಗಾಗಿ, ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂಬುದು ಜನರ ಮನವಿಯಾಗಿದೆ.

ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಸಂತ್ರಸ್ತರಿಂದ ದಾಖಲೆಗಳನ್ನು ಸಂಗ್ರಹಿಸಲಾಗ್ತಿದೆ ಎಂದು ಸ್ಥಳೀಯ ಆಶಾ ಕಾರ್ಯಕರ್ತೆ ಮಾಹಿತಿ ನೀಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸರ್ಕಾರ ಯಾವ ರೀತಿ ಪರಿಹಾರ ಒದಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details