ಕಾರವಾರ:ಮಳೆಯ ರೌದ್ರಾವತಾರಕ್ಕೆ ಮುಳುಗಡೆಯಾಗಿದ್ದ ಗ್ರಾಮಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಹಲವೆಡೆ ಹತ್ತಾರು ವರ್ಷಗಳಿಂದ ದುಡಿದು ಕಟ್ಟಿಕೊಂಡಿದ್ದ ಮನೆ, ಅಗತ್ಯ ವಸ್ತುಗಳು ನೀರುಪಾಲಾಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿದ ಅವಾಂತರ ಲೆಕ್ಕ ಹಾಕಲೂ ಸಾಧ್ಯವಾಗುತ್ತಿಲ್ಲ. ಆರೇಳು ದಿನಗಳ ಕಾಲ ಮುಳುಗಡೆಯಾಗಿದ್ದಂತಹ ಮನೆಗಳಲ್ಲಿನ ನೀರು ಈಗ ಸಂಪೂರ್ಣ ಇಳಿದಿದ್ದು, ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಕಣ್ಣೀರು, ಮೌನ ಬಿಟ್ಟು ಬೇರೇನು ಸಿಗದ ಹಾಗಾಗಿದೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿಯೂ ಇದೇ ಸ್ಥಿತಿ ಇದ್ದು, ಇಲ್ಲಿ ಮುಳುಗಡೆಯಾಗಿದ್ದ ಸುಮಾರು 400 ಮನೆಗಳಲ್ಲಿ ಇದೀಗ ನೀರು ಸಂಪೂರ್ಣ ಇಳಿಕೆಯಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿದ್ದ ಜನರು ಮನೆಗಳತ್ತ ಧಾವಿಸಿದ್ದು, ಕಳೆದೆರಡು ದಿನಗಳಿಂದ ಮನೆಯನ್ನು ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದಾರೆ.
ಮನೆಯಲ್ಲಿದ್ದ ಬಟ್ಟೆ, ಅಕ್ಕಿ, ಬೆಳೆ, ಇತರೆ ಸಾಮಾನುಗಳು, ಕಾಗದ ಪತ್ರ ಎಲ್ಲವೂ ನೀರಾಗಿವೆ. ಇದರಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳೂ ಕಸವಾಗಿ ಮಾರ್ಪಟ್ಟಿದ್ದು, ಇವುಗಳನ್ನು ಸ್ವಚ್ಛ ಮಾಡುವುದೇ ದೊಡ್ಡ ತಲೆನೋವಾಗಿದೆ. ಅಲ್ಲದೆ ನೀರು ನಿಂತಿದ್ದರಿಂದ ಗಬ್ಬು ವಾಸನೆ ಬರುತ್ತಿದ್ದು, ಮನೆಗಳಿಗೆ ತೆರಳಲಾಗದ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರಾದ ಸೂರಜ್.