ಕಾರವಾರ : ಕಡಲ ತೀರ ಉಳಿಸಿ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದ್ದು ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ತಡೆಯುವಂತೆ ಮೀನುಗಾರರು ಒತ್ತಾಯಿಸಿದ್ದರು, ಆದರೆ ಮೀನುಗಾರರ ವಿರೋಧದ ನಡುವೆಯೂ ಅಧಿಕಾರಿಗಳು ಕಾಮಗಾರಿಯನ್ನು ಮತ್ತೆ ಪ್ರಾರಂಭಿಸಲು ಮುಂದಾಗುತ್ತಿದ್ದಂತೆ ಪ್ರತಿಭಟನೆ ಮುಂದುವರೆಸಿದ್ದಾರೆ.
ವಾಣಿಜ್ಯ ಬಂದರು ವಿಸ್ತರಣೆಯಿಂದ ಕಡಲ ತೀರಕ್ಕೆ ಹಾಗೂ ಮೀನುಗಾರರಿಗೆ ಹಾನಿಯಾಗಲಿದೆ ಎಂದು ಕಾರವಾರ ಬಂದ್ ಮಾಡುವ ಮೂಲಕ ಮೀನುಗಾರರು ಆಕ್ರೋಶವನ್ನು ಹೊರಹಾಕಿದ್ದರು. ಅಲ್ಲದೇ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಸ್ಥಗತಗೊಳಿಸುವಂತೆ ಆಗ್ರಹ ಮಾಡಿದ್ದರಿಂದ ನಿನ್ನೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.
ಆದರೆ ಇವತ್ತು ಮೀನುಗಾರರ ವಿರೋಧದ ನಡುವೆಯೇ ಕಾಮಗಾರಿಗೆ ಚಾಲನೆ ನೀಡಲು ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮೀನುಗಾರರು ಜಮಾವಣೆಗೊಂಡು, ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಕುಳಿತು ಕಾಮಗಾರಿ ಮಾಡದಂತೆ ಪಟ್ಟು ಹಿಡಿದರು.
ಕಡಲ ಉಳಿವಿಗಾಗಿ ಮುಂದುವರೆದ ಪ್ರತಿಭಟನೆ ಇತ್ತ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ, ಕಾಮಗಾರಿ ಸಂಪೂರ್ಣ ಸ್ಥಗಿತ ಗೊಳಿಸುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದರು. ಪ್ರತಿಭಟನೆಯ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ತಿರುಗಿದ್ದು ಪ್ರತಿಭಟನೆಯ ಹಿಂದೆ ಮಾಜಿ ಶಾಸಕ ಸತೀಶ್ ಸೈಲ್ ಇದ್ದಾರೆ, ಮುಗ್ದ ಮೀನುಗಾರರನ್ನು ಸತೀಶ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.
ರೂಪಾಲಿ ನಾಯ್ಕ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಸೈಲ್ ಅಡಗಿ ಕುಳಿತುಕೊಳ್ಳುವ ಬದಲು ಮೀನುಗಾರರ ಮಧ್ಯೆ ಬರಲಿ. ಸುಮ್ಮನೇ ಎಲ್ಲೋ ಕುಳಿತು ತನ್ನ ವಿರುದ್ದ ಟೀಕೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.