ಕಾರವಾರ: ಕಾರವಾರದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಉದ್ಯೋಗ. ಈ ಹಿಂದೆ ಮೀನುಗಾರಿಕೆ ನಡೆಸಿದ ಬಳಿಕ ಬಹುತೇಕ ಮೀನುಗಾರರು ಬಲೆ ಬೋಟ್ಗಳನ್ನು ಕಡಲತೀರದಲ್ಲಿಯೇ ಇಡುತ್ತಿದ್ದರು. ಆದರೆ, ಕಳೆದ ಐದು ವರ್ಷಗಳ ಹಿಂದೆ ಜಿಲ್ಲಾಡಳಿತವು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಡಲತೀರದ ಬಳಿ ಮೀನುಗಾರರು ಕಟ್ಟಿಕೊಂಡಿದ್ದ ನೂರಾರು ಶೆಡ್‌ಗಳನ್ನು ತೆರವುಗೊಳಿಸಿ ಬೃಹತ್ ಗಾತ್ರದ ಮೂರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿತ್ತು. ಅದು ಕೂಡ ಇದೀಗ ತುಕ್ಕು ಹಿಡಿದು ಅಸ್ಥಿಪಂಜರದಂತಾಗಿದೆ.
ಹೌದು, ಕಾರವಾರದಲ್ಲಿ ಕಡಲ ಮಕ್ಕಳಿಗೆ ಮೀನುಗಾರಿಕೆಯೇ ಬದುಕು. ಈ ಹಿಂದಿನಿಂದಲೂ ಸಾಂಪ್ರದಾಯಿಕ ಮೀನುಗಾರರು ಕಡಲತೀರದಲ್ಲಿ ತಮ್ಮ ಬೋಟು, ಬಲೆಗಳನ್ನು ಇರಿಸಿ ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕಡಲತೀರದಲ್ಲೇ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ತಮ್ಮ ಮೀನುಗಾರಿಕಾ ಸಲಕರಣೆಗಳನ್ನು ಇರಿಸಿಕೊಳ್ಳುತ್ತಿದ್ದರು. ಆದರೆ, ಕಳೆದ 2016ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಉಜ್ವಲ್ ಕುಮಾರ ಘೋಷ್ ಅವರು ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಅಭಿವೃದ್ಧಿ ನಡೆಸುವ ಉದ್ದೇಶದಿಂದ ಕಡಲತೀರದಲ್ಲಿ ಮೀನುಗಾರರು ನಿರ್ಮಿಸಿದ್ದ ಶೆಡ್‌ಗಳನ್ನ ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ್ದರು. ಇದಕ್ಕೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಜಿಲ್ಲಾಡಳಿತದಿಂದಲೇ ಸುಸಜ್ಜಿತ ಶೆಡ್‌ಗಳನ್ನು ನಿರ್ಮಿಸಿಕೊಡೋದಾಗಿ ಭರವಸೆ ನೀಡಿದ್ದರು. ಅದಾದ ಬಳಿಕ ನಗರದ ಬಿಲ್ಟ್ ವೃತ್ತದ ಬಳಿ ಕಡಲತೀರಕ್ಕೆ ಹೊಂದಿಕೊಂಡೇ ಮೂರು ಶೆಡ್‌ಗಳನ್ನು ನಿರ್ಮಿಸಿದ್ದರಾದರೂ ಅವು ಇದೀಗ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿವೆ. ಶೆಡ್ ಸಂಪೂರ್ಣ ಹಾಳಾಗಿ ಕೇವಲ ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ ಎಂದು ಮೀನುಗಾರ ಪ್ರಕಾಶ ಹರಿಕಂತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಿಷೇಧದ ನಡುವೆಯೂ ಜೋರಾದ ಬೆಳಕು ಮೀನುಗಾರಿಕೆ: ಇಲಾಖೆಯ ದಂಡಕ್ಕೆ ಡೋಂಟ್ ಕೇರ್!