ಕಾರವಾರ:ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭಕ್ಕೆ ಅನುಮತಿ ಸಿಕ್ಕಿದ್ದರೂ ಬಹುತೇಕ ಯಾಂತ್ರಿಕೃತ ಬೋಟುಗಳು ಬಂದರಿನಲ್ಲೆ ಲಂಗರು ಹಾಕಿವೆ. ಆದರೆ, ಎಂಡಿ ಬಲೆ ಮೂಲಕ ದಡದಿಂದಲೆ ಮೀನುಗಾರಿಕೆ ನಡೆಸುವ ಮೀನುಗಾರರ ಬಲೆಗೆ ಭರಪೂರ ಮೀನು ಬೇಟೆಯಾಗಿದ್ದು, ದುರದೃಷ್ಟವಶಾತ್ ಸೂಕ್ತ ಬೆಲೆಯಿಲ್ಲದೆ ಮೀನುಗಾರರು ನಿರಾಸೆಯಾಗಿದ್ದಾರೆ.
ಸಾಮಾನ್ಯವಾಗಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳುವ ಜೂನ್, ಜುಲೈ ತಿಂಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಮೀನುಗಳು ಮರಿ ಇಡುವ ಹಿನ್ನೆಲೆ ಕೇವಲ ದಡದ ಸಮೀಪದಲ್ಲಿ ಮೀನುಗಾರಿಕೆಗೆ ಅವಕಾಶವಿದ್ದು, ಈ ಸಂದರ್ಭದಲ್ಲಿ ಏಂಡಿ ಮೀನುಗಾರಿಕೆಯನ್ನು ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಚಂಡಮಾರುತ ಹಾಗೂ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ದಡ ಮೀನುಗಾರಿಕೆ ಮಾಡುವುದು ಸಾಧ್ಯವಿಲ್ಲದಂತಾಗಿತ್ತು.
ಕೊರೊನಾ ಎಫೆಕ್ಟ್:
ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಯಾಂತ್ರಿಕ ಬೋಟುಗಳು ಡಿಸೇಲ್ ಬೆಲೆ ಏರಿಕೆ, ಕೊರೊನಾ ಸೇರಿ ಇನ್ನಿತರ ಕಾರಣದಿಂದ ಇನ್ನೂ ಕಡಲಿಗಿಳಿಯದ ಹಿನ್ನೆಲೆಯಲ್ಲಿ ದಡದಲ್ಲಿ ಏಂಡಿ ಬೀಸಿದ್ದ ಮೀನುಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೀಗಡಿ ಸೇರಿದಂತೆ ರಾಶಿ ರಾಶಿ ಮೀನುಗಳು ಬಲೆಗೆ ಬಿದ್ದಿವೆ. ಒಂದೆಡೆ ಮೀನು ಸಿಕ್ಕಿರುವುದು ಖುಷಿಯ ವಿಚಾರವಾಗಿದ್ದರೂ ಮೀನುಗಳ ಖರೀದಿ ಮಾಡುವವರಿಲ್ಲದಿರುವುದು ಮೀನುಗಾರರಿಗೆ ಬೇಸರ ಮೂಡಿಸಿದೆ.