ಕಾರವಾರ: ಹಂದಿಗೆ ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ನಡೆದಿದೆ. ಮೃತಪಟ್ಟ ಚಿರತೆಯನ್ನು ಅಂದಾಜು ಒಂದು ವರ್ಷದ ಹೆಣ್ಣು ಚಿರತೆ ಎಂದು ಹೇಳಲಾಗಿದೆ. ಜಮೀನಿಗೆ ಬರುವ ಕಾಡುಪ್ರಾಣಿಗಳ ಹಾವಳಿ ತಡೆಯಲೋ ಅಥವಾ ಕಾಡುಪ್ರಾಣಿಯನ್ನು ಬೇಟೆಯಾಡಲು ಇಟ್ಟಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಡಿ.ಎಫ್.ಓ ರವಿಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಗದ ಮಾಲೀಕರಿಂದ ಮಾಹಿತಿ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಾಲೂಕಿನ ಮುಗ್ವಾ, ಹೊಸಾಕುಳಿ, ಸಾಲ್ಕೋಡ್ ಭಾಗದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೇ ನಾಯಿ, ಆಕಳುಗಳ ಮೇಲೆ ದಾಳಿ ಮಾಡಿವೆ ಎಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದರು.