ಕಾರವಾರ:ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವೃದ್ಧ ದಂಪತಿ. ಕಳೆದ 50 ವರ್ಷಗಳಿಂದ ಗ್ರಾಮ ಪಂಚಾಯತ್ ಹಿಂಬದಿಯ ಗುಡಿಸಲಿನಲ್ಲೇ ಜೀವನ ಸಾಗಿಸುತ್ತಿದ್ದು, ಇಲ್ಲಿಯವರೆಗೆ ಸ್ವಂತ ಸೂರು ಸಿಕ್ಕಿಲ್ಲ.
ಸ್ವಂತ ಜಾಗ ಇಲ್ಲದ ಕಾರಣ ದಂಪತಿಗೆ ಮನೆ ನೀಡುವುದಕ್ಕೂ ತೊಂದರೆ ಎದುರಾಗಿದ್ದು, ಸರ್ಕಾರಿ ಜಾಗದಲ್ಲೇ ಜೀವನ ಸಾಗಿಸುವಂತಾಗಿದೆ. ಜೊಯಿಡಾ ತಾಲ್ಲೂಕಿನ ನಂದಿಗದ್ದಾ ಗ್ರಾಮದ ನಿವಾಸಿಗಳಾಗಿರುವ ಹರಿಶ್ಚಂದ್ರ ದೇಶಬಂಡಾರಿ ಹಾಗೂ ಲಕ್ಷ್ಮೀ ದಂಪತಿ ಇಂತಹದ್ದೊಂದು ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯತ್ ಪಕ್ಕದಲ್ಲೇ ಜೋಪಡಿ ಕಟ್ಟಿಕೊಂಡು ದಯನೀಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದು, ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಈ ಹಿಂದೆ ವಲಸೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿ, ಸ್ವಂತ ಜಮೀನು ಅಥವಾ ಭೂಮಿ ಇಲ್ಲದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಾಗಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದೆರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸದ್ಯ ಕಟ್ಟಡದ ಸಮೀಪದಲ್ಲೇ ಸಣ್ಣ ಗುಡಿಸಲೊಂದನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.