ಕರ್ನಾಟಕ

karnataka

ETV Bharat / state

ಅರೆಬರೆ ಹೆದ್ದಾರಿಗೆ ದುಪ್ಪಟ್ಟು ಟೋಲ್ ವಸೂಲಿ.. ಬಸ್​ ದರ ಕೂಡ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ! - ಟೋಲ್ ದರ ಏರಿಕೆ

ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ - 3ನೇ ಬಾರಿ ಟೋಲ್ ದರ ಏರಿಕೆ - ಐಆರ್​​ಬಿ ಕಂಪನಿ ವಿರುದ್ಧ ಸ್ಥಳೀಯರ ಆಕ್ರೋಶ.

Karwar
ರಾಷ್ಟ್ರೀಯ ಹೆದ್ದಾರಿ 66 ಟೋಲ್ ಗೇಟ್​

By

Published : Apr 26, 2023, 2:20 PM IST

ಟೋಲ್ ದರ ಏರಿಕೆ ವಿರುದ್ಧ ಜನರ ಆಕ್ರೋಶ..

ಕಾರವಾರ: ಕರಾವಳಿಯಲ್ಲಿ ಹಾದು ಹೋಗಿರುವ ಬಹುಮುಖ್ಯ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥಗೊಳಿಸುವ ಕಾರ್ಯ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ. ಅರೆಬರೆ ಕಾಮಗಾರಿಯ ನಡುವೆಯೇ ಉದ್ಘಾಟನೆ ಮಾಡಿ ಟೋಲ್ ಸಂಗ್ರಹಕ್ಕೆ ಇಳಿದಿದ್ದ ಗುತ್ತಿಗೆ ಕಂಪನಿ ಇದೀಗ 3ನೇ ಬಾರಿ ಟೋಲ್ ದರ ಏರಿಕೆ ಮಾಡಿದೆ. ಹೆದ್ದಾರಿ ಪೂರ್ಣಗೊಳ್ಳದೇ ಪದೇ ಪದೆ ಟೋಲ್ ದರ ಏರಿಸಿರುವುದಕ್ಕೆ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಗೋವಾದ ಮಾಜಾಳಿಯಿಂದ ಕುಂದಾಪುರದವರೆಗೆ ಗುತ್ತಿಗೆ ಪಡೆದ ಐಆರ್​​ಬಿ ಕಂಪನಿ ಕಾಮಗಾರಿ ನಡೆಸುತ್ತಿದೆ. ಆದರೆ, ಜಿಲ್ಲೆಯ ಬಹುತೇಕ ತಾಲೂಕು ವ್ಯಾಪ್ತಿಯಲ್ಲಿ ಹೆದ್ದಾರಿ ಅರೆಬರೆಯಾಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಇದೆ. ಇಷ್ಟಾದರೂ ಶೇ.75 ರಷ್ಟು ರಸ್ತೆ ನಿರ್ಮಾಣವಾಗಿದ್ದು, ಅದಕ್ಕೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಗುತ್ತಿಗೆ ಪಡೆದ ಐಆರ್​ ಟೋಲ್‌ವೇಸ್ ಪ್ರೈ ಕಳೆದ 3 ವರ್ಷದಿಂದಲೇ ಟೋಲ್ ಸಂಗ್ರಹ ಪ್ರಾರಂಭಿಸಿದೆ.

3ನೇ ಬಾರಿ ಟೋಲ್ ದರ ಏರಿಕೆ: ಇಷ್ಟಾದರೂ ಜಿಲ್ಲೆಯಲ್ಲಿ ಈವರೆಗೂ ಹೆದ್ದಾರಿ ಪೂರ್ಣಗೊಂಡಿಲ್ಲ.‌ ಕಾರವಾರದಲ್ಲಿ ಫೈ ಓವರ್, ಸುರಂಗ ಮಾರ್ಗ, ಅರಗಾ, ಬಿಣಗಾ, ಮುದಗಾ, ಅಂಕೋಲಾದ ಶಿರೂರು, ಘಟ್ಟಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಕುಮಟಾ, ಹೊನ್ನಾವರ, ಭಟ್ಕಳದ ಪಟ್ಟಣಗಳಲ್ಲಿ ರಸ್ತೆ ಕಾಮಗಾರಿ ಮುಕ್ತಾಯವಾಗಿಲ್ಲ. ಅನಿರೀಕ್ಷಿತ ತಿರುವುಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಿರುವಾಗಲೇ ಇದೀಗ 3ನೇ ಬಾರಿಗೆ ಮತ್ತೆ ಏ.1 ರಿಂದ ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಈ ಮೂಲಕ ಗುತ್ತಿಗೆ ಪಡೆದ ಐಆರ್​​ಬಿ ಕಂಪನಿ ಹಗಲು ದರೋಡೆ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಯಾಣಿಕರ ಜೇಬಿಗೆ ಕತ್ತರಿ:ಜಿಲ್ಲೆಯ ಕರಾವಳಿಯಲ್ಲಿ ಹಟ್ಟಿಕೇರಿ ಹಾಗೂ ಹೊಳೆಗದ್ದೆ ಬಳಿ ಎರಡು ಟೋಲ್ ಗೆಟ್ ಇದೆ. ಈ ಹಿಂದೆ ಕಾರು, ಜೀಪು ಹಾಗೂ ಲಘು ವಾಹನಗಳಿಗೆ ಏಕಮುಖ ಸಂಚಾರಕ್ಕೆ 110 ರೂ, ಹೋಗಿ ಬರುವುದಕ್ಕೆ 165 ರೂ, ಜಿಲ್ಲೆಯ ನೋಂದಣಿ ವಾಹನಗಳಿಗೆ 55, ಲಘು ವಾಣಿಜ್ಯ, ಸರಕು, ಮಿನಿ ಬಸ್​​ಗಳಿಗೆ 175 ರೂ. ಹಾಗೂ ಹೋಗಿ ಬರುವುದಕ್ಕೆ 260 ರೂ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ದೊಡ್ಡ ಹೊರೆಯಾಗಿದೆ. ಮಾತ್ರವಲ್ಲದೇ ಟೋಲ್ ದರ ಏರಿಕೆಯಾದ ಬೆನ್ನಲ್ಲೇ ಬಸ್ ದರ ಕೂಡ ಒಂದು 2 ರೂ. ಏರಿಕೆ ಮಾಡಿದ್ದು ಪ್ರಯಾಣಿಕರು ಪರಿ ತಪಿಸುವಂತಾಗಿದೆ.

"ಮೊದಲೇ ಪೆಟ್ರೋಲ್ ದರ ಏರಿಕೆಯಾಗಿದೆ. ನಾವೆಲ್ಲರೂ ಜಿಲ್ಲಾ ಕೇಂದ್ರಕ್ಕೆ ನೂರಾರು ಕಿ.ಮೀ ದಾಟಿ ಬರಬೇಕು. ಆದರೆ ಇದೀಗ ಈ ರೀತಿ ಟೋಲ್ ದರ ಹೆಚ್ಚಳ ಮಾಡಿ ಇದೀಗ ನಮ್ಮ ಜೇಬಿನಿಂದಲೂ ಕಸಿಯುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಬಡವರು ಬಸ್​​ನಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ" ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ತೆರೆದು ವಸೂಲಿಗೆ ಮುಂದಾಗಿದ್ದ ಕಂಪನಿ ಇದೀಗ ಮತ್ತೆ ಟೋಲ್ ದರ ದುಪ್ಪಟ್ಟು ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಸಂಬಂಧಪಟ್ಟ ಕಂಪನಿಗೆ ಸೂಚಿಸಿ ಟೋಲ್ ದರ ಇಳಿಸಲು ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!

ABOUT THE AUTHOR

...view details