ಸಮುದ್ರಕ್ಕೆ ಇಳಿಯದಂತೆ ಕಾರವಾರ ಜಿಲ್ಲಾಡಳಿತ ಸೂಚನೆ ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಡಲ ತೀರ ರೌದ್ರಾವತಾರ ತಾಳಿದೆ. ಬಿಪೊರ್ ಜಾಯ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಇದರಿಂದ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. ಇನ್ನು ವೀಕೆಂಡ್ ಹಿನ್ನೆಲೆಯಲ್ಲಿ ಕಡಲತೀರಕ್ಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದ್ದು, ಕಡಲಿಗೆ ಇಳಿದು ಎಂಜಾಯ್ ಮಾಡಲು ಮುಂದಾಗುತ್ತಿರುವುದು ಅಪಾಯವನ್ನು ಆಹ್ವಾನಿಸುವಂತಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಇನ್ನೂ ಪ್ರವೇಶ ಮಾಡಿಲ್ಲ. ಮಳೆಗಾಗಿ ಜನರು ಕಾಯುತ್ತಿರುವ ನಡುವೆ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಬೀಳಲು ಪ್ರಾರಂಭವಾಗಿದೆ. ಬಿಪೊರ್ ಜಾಯ್ ಚಂಡಮಾರುತ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದು, ಗಾಳಿ ಮಳೆ ಜೋರಾಗಿದೆ. ಇದರ ನಡುವೆ ಸಮುದ್ರ ಸಹ ತನ್ನ ಸ್ವರೂಪ ಬದಲಿಸಿದ್ದು, ರೌದ್ರಾವತಾರ ತಾಳಿದೆ. ಕಳೆದ ಎರಡು ದಿನಗಳಿಂದ ಅಲೆಗಳ ಅಬ್ಬರ ಅಧಿಕವಾಗಿದ್ದು, ಸ್ವಲ್ಪ ಯಾಮಾರಿದರು ಪ್ರವಾಸಿಗರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೀಕೆಂಡ್ ಆದ ಹಿನ್ನೆಲೆಯಲ್ಲಿ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅಪಾಯಕಾರಿ ಕಡಲಿಗೆ ಇಳಿದು ಆಟ ಆಡಲು ಮುಂದಾಗುತ್ತಿದ್ದಾರೆ. ಇನ್ನು ಪ್ರವಾಸಿಗರನ್ನು ಎಚ್ಚರಿಸಲು ಟೂರಿಸ್ಟ್ ಮಿತ್ರ, ಪೊಲೀಸರನ್ನ ನಿಯೋಜನೆ ಮಾಡಿದರು ಸಿಬ್ಬಂದಿಗಳ ಮಾತು ಲೆಕ್ಕಿಸದೇ ನೀರಿಗೆ ಇಳಿಯುತ್ತಿದ್ದಾರೆ. ಚಂಡಮಾರುತದ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.
ಟೂರಿಸ್ಟ್ ಮಿತ್ರ ರಾಘವೇಂದ್ರ ಮಾತನಾಡಿ, ಜೂ.9 ರಿಂದ 11ನೇ ತಾರೀಖಿನ ವರೆಗೆ ಜಿಲ್ಲಾಧಿಕಾರಿಯವರು ರೇಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಬೋರ್ಡ್ ಸಹ ಹಾಕಲಾಗಿದೆ. ಜೊತೆಗೆ ಪ್ರವಾಸಿಮಿತ್ರ, ಲೈಫ್ ಗಾರ್ಡ್ ಸಿಬ್ಬಂದಿ ಎಲ್ಲರು ಸೇರಿ ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ಕೆಲ ಪ್ರವಾಸಿಗರು ನಮ್ಮ ಮಾತು ಕೇಳದೆ ನೀರಿಗೆ ಇಳಿಯುತ್ತಿದ್ದಾರೆ. ಇದರಿಂದ ಅಪಾಯ ತಂದುಕೊಳ್ಳುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಅಲೆ ಹೆಚ್ಚಾಗಿ ಸಮುದ್ರ ರಫ್ ಆಗಿರುವ ಕಾರಣ ಈ ವೇಳೆ ಅವಘಡ ಸಂಭವಿಸಿದ್ದಲ್ಲಿ ರಕ್ಷಣೆಯೂ ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಪ್ರವಾಸಿಗರು ಈ ಬಗ್ಗೆ ಗಮನ ಹರಿಸಬೇಕು ಎಂದು ಟೂರಿಸ್ಟ್ ಮಿತ್ರ ರಾಘವೇಂದ್ರ ಮನವಿ ಮಾಡಿದ್ದಾರೆ.
ಲೈಫ್ ಗಾರ್ಡ್ ಸಿಬ್ಬಂದಿ ಪ್ರಶಾಂತ್ ಮಾತನಾಡಿ, ಇನ್ನು ಮೂರು ದಿನಗಳ ಕಾಲ ಕಡಲಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡಲ ತೀರಗಳಲ್ಲಿ ಕೆಂಪು ಬಾವುಟಗಳನ್ನು ಹಾಕಿ ಪ್ರವಾಸಿಗರಿಗೆ ಎಚ್ಚರಿಸುವ ಕಾರ್ಯಕ್ಕೆ ಸಿಬ್ಬಂದಿಗಳು ಮುಂದಾಗುತ್ತಿದ್ದಾರೆ. ಆದಾಗ್ಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜಿಲ್ಲಾಡಳಿತದ ಎಚ್ಚರಿಕೆ ಕ್ಯಾರೆ ಎನ್ನುತ್ತಿಲ್ಲ. ಇನ್ನು ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕುವ ಪ್ರವಾಸಿಗರ ರಕ್ಷಣೆ ಮಾಡಲು ಕಡಲ ತೀರದಲ್ಲಿ ಲೈಫ್ ಗಾರ್ಡ್ ಗಳನ್ನ ನಿಯೋಜನೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಮುಂದೆ ಕಡಲು ಪ್ರವಾಸಿಗರನ್ನ ಎಳೆದುಕೊಂಡು ಹೋದರು ರಕ್ಷಣೆ ಮಾಡಲು ಆಗುವುದಿಲ್ಲ. ಪ್ರವಾಸಿಗರೇ ಕಡಲಿಗೆ ಇಳಿಯುವ ಮುನ್ನ ಎಚ್ಚರ ವಹಿಸಬೇಕು ಎಂದರು.
ಜಿಲ್ಲೆಯ ಕಾರವಾರದ ಠಾಗೋರ್ ಕಡಲ ತೀರ, ಗೋಕರ್ಣದ ಕುಡ್ಲೆ, ಓಂ ಬೀಚ್ ಹಾಗೂ ಮುಖ್ಯ ಕಡಲ ತೀರ, ಕುಮಟಾದ ವನ್ನಳ್ಳಿ ಕಡಲ ತೀರ, ಹೊನ್ನಾವರದ ಕಾಸರಕೋಡ ಕಡಲ ತೀರ ಹಾಗೂ ಭಟ್ಕಳದ ಮುರುಡೇಶ್ವರ ಕಡಲ ತೀರಗಳಿಗೆ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದೆ.
ಇದನ್ನೂ ಓದಿ:ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಕಿಷ್ಕಿಂಧಾ ಯುವ ಚಾರಣ ಬಳಗ: ವಿಡಿಯೋ