ಕಾರವಾರ:ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಕೊರೊನಾ 2ನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಂಕು ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದ್ದು, ಇದೀಗ ಗೋವಾ ಸರ್ಕಾರ ಕೂಡ ಲಾಕ್ಡೌನ್ ವಿಧಿಸಿದೆ. ಇದರ ಪರಿಣಾಮವೀಗ ಗಡಿ ಭಾಗದಲ್ಲಿರುವ ಕನ್ನಡಿಗರಿಗೂ ತಟ್ಟಿದೆ. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳ ಮೂಲಕ ಬದುಕು ಕಟ್ಟಿಕೊಂಡವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗೋವಾದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ವಾರಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮೂಲಕ ಕರ್ನಾಟಕ-ಗೋವಾ ನಡುವೆ ಅನಗತ್ಯವಾಗಿ ಓಡಾಡುವವರಿಗೆ ಎರಡು ರಾಜ್ಯಗಳಲ್ಲಿ ಕಡಿವಾಣ ಹಾಕಲಾಗಿದೆ. ಅದರಲ್ಲಿಯೂ ಗೋವಾ ಪ್ರವಾಸಿ ತಾಣಗಳಿಗೆ ಹಾಗೂ ಗೋವಾ ಮದ್ಯಕ್ಕಾಗಿ ರಾಜ್ಯದಿಂದ ಹೋಗುತ್ತಿದ್ದವರಿಗೂ ಬ್ರೇಕ್ ಹಾಕಲಾಗಿದೆ. ಇದರ ಪರಿಣಾಮ ಗಡಿ ಭಾಗದಲ್ಲಿ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಿಗೆ ತಟ್ಟಿದೆ.
ಕಾರವಾರಕ್ಕೆ ಗೋವಾ ಗಡಿ ಭಾಗ ಸಮೀಪದಲ್ಲಿರುವ ಕಾರಣ ಹೆಚ್ಚಿನ ಮಂದಿ ಗೋವಾಗೆ ತೆರಳಿ ಎಂಜಾಯ್ ಮಾಡಿ ಆಗಮಿಸುತ್ತಿದ್ದರು. ಆದರೆ ಕೊರೊನಾ ಕರ್ಫ್ಯೂ ಬಳಿಕ ಗಡಿಯಲ್ಲಿ ಮುಕ್ತ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಪ್ರವಾಸಿಗರನ್ನೇ ನಂಬಿದ್ದ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ಗಳು ಖಾಲಿ ಹೊಡೆಯುತ್ತಿವೆ. ಅಲ್ಲದೆ ತರಕಾರಿ, ಮೀನು ಹೀಗೆ ಎಲ್ಲದಕ್ಕೂ ಕಾರವಾರವನ್ನೇ ಅವಲಂಬಿಸಿದ್ದ ಗಡಿಯಲ್ಲಿದ್ದ ಕನ್ನಡಿಗರ ಉದ್ಯಮದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಗೋವಾ ಸರ್ಕಾರ ಕೂಡ ಲಾಕ್ಡೌನ್ ವಿಧಿಸಿದ್ದು, ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.