ಕಾರವಾರ:ಕಾರವಾರ ನಗರದ ವಾಣಿಜ್ಯ ಬಂದರನ್ನು ಸರ್ವಖುತು ಬಂದರು ಎಂದೇ ಕರೆಯಲಾಗುತ್ತದೆ. ವರ್ಷದ ಎಲ್ಲ ಅವಧಿಯಲ್ಲೂ ಬಂದರಿಗೆ ಹಡಗುಗಳು ಬಂದು ಹೋಗಲು ಯಾವುದೇ ಅಡೆತಡೆ ಬರದ ಬಂದರು ಕಾರವಾರ ವಾಣಿಜ್ಯ ಬಂದರು. ಈ ವರ್ಷ ಬಂದರು ವ್ಯವಹಾರ ಲಾಭದಾಯಕದತ್ತ ಸಾಗಿದ್ದು, ಸುಮಾರು 21 ಕೋಟಿಗೂ ಅಧಿಕ ಹಣ ಗಳಿಕೆ ಮಾಡುವ ಮೂಲಕ ಬಂದರು ವ್ಯವಹಾರ ನಷ್ಟದಿಂದ ಲಾಭದತ್ತ ಸಾಗುವಂತಾಗಿದೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಾಣಿಜ್ಯ ಬಂದರು ಸದ್ಯ ಲಾಭದತ್ತ ಸಾಗುವ ಮೂಲಕ ಗಮನ ಸೆಳೆದಿದೆ. ಕೋವಿಡ್ ನಂತರ ಬಂದರಿಗೆ ಹಡಗುಗಳು ಬರುವ ಸಂಖ್ಯೆ ಕಡಿಮೆಯಾಗಿ ವ್ಯವಹಾರದಲ್ಲಿ ಕುಂಠಿತವಾಗಿತ್ತು. ಮಾರ್ಚ್ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದ್ದು, ಪ್ರತಿ ಆರ್ಥಿಕ ವರ್ಷ ಕೊನೆಯ ಅವಧಿಯಲ್ಲಿ ಬಂದರು ಇಲಾಖೆ ವರ್ಷದಲ್ಲಿ ಬಂದರಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಬಾರಿ ಇಲಾಖೆ ತನ್ನ ವರದಿ ಬಿಡುಗಡೆ ಮಾಡಿದ್ದು ಕಳೆದ ವರ್ಷಕ್ಕಿಂತ ಬಹುತೇಕ ಎಲ್ಲ ವ್ಯವಹಾರದಲ್ಲಿ ಹೆಚ್ಚಿಗೆ ಆಗಿರುವುದಾಗಿ ತಿಳಿಸಿದೆ.
ವಾಣಿಜ್ಯ ಬಂದರಿಗೆ 2021-22 ನೇ ಸಾಲಿನಲ್ಲಿ ಸುಮಾರು 120 ಹಡಗುಗಳು ಆಗಮಿಸಿದ್ದವು. ಈ ವೇಳೆ, ಸುಮಾರು 3,74,028 ಮೆಟ್ರಿಕ್ ಟನ್ ಆಮದನ್ನು ಬಂದರಿನಲ್ಲಿ ಹಡಗಿನಿಂದ ಮಾಡಿಕೊಂಡಿದ್ದು, 3,57,379 ಮೆಟ್ರಿಕ್ ಟನ್ ರಫ್ತು ಮಾಡಲಾಗಿತ್ತು. 2022-23ನೇ ಸಾಲಿನಲ್ಲಿ 148 ಹಡಗುಗಳು ಆಗಮಿಸಿದೆ. ಇನ್ನು 4,47,026 ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದು, 4,66,293 ರಫ್ತು ವ್ಯವಹಾರ ಬಂದರಿನಲ್ಲಿ ನಡೆದಿದೆ. ಬಂದರಿಗೆ ಹಡಗುಗಳ ಬರುವಿಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ 23.3 ರಷ್ಟು ಹೆಚ್ಚಳ ಕಂಡಿದ್ದರೆ, ಆಮದಿನಲ್ಲಿ ಶೇಕಡಾ 19.5 ರಫ್ತಿನಲ್ಲಿ ಶೇಕಡಾ 24.87 ರಷ್ಟು ಹೆಚ್ಚಳವಾಗಿದೆ. ಇನ್ನು 2021-22ನೇ ಸಾಲಿನಲ್ಲಿ ಬಂದರು ವ್ಯವಹಾರದಿಂದ ಸುಮಾರು 16,96,41.974 ಕೋಟಿ ಹಣವನ್ನು ಇಲಾಖೆ ಗಳಿಕೆ ಮಾಡಿತ್ತು. 2022-23ನೇ ಸಾಲಿನಲ್ಲಿ 21,00,86,590 ಕೋಟಿ ಗಳಿಕೆ ಮಾಡಿದ್ದು, ಶೇಕಡಾ 24 ರಷ್ಟು ಗಳಿಕೆ ಪ್ರಮಾಣ ಹೆಚ್ಚಾಗಿದೆ.