ಕಾರವಾರ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳೇ ಬ್ಯಾಂಕಿನಲ್ಲಿ ವಂಚನೆ ಮಾಡುತ್ತಿರುವ ಕೆಲ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಮತ್ತೊಂದು ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕಿನಿಂದ ಸುಮಾರು 2.69 ಕೋಟಿ ಹಣವನ್ನು ತನ್ನ ಹೆಂಡತಿ ಖಾತೆಗೆ ಜಮಾ ಮಾಡಿ ನಾಪತ್ತೆಯಾಗಿದ್ದು, ಇದೀಗ ಈತನ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇರುವುದು ತಿಳಿದುಬಂದಿದೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರೇ ಬ್ಯಾಂಕಿಗೆ ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎಂಬುವರು ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದರು. ಸೇರ್ಪಡೆಗೊಂಡಾಗಿನಿಂದ ಸೆ.5ರವರೆಗೆ ಬ್ಯಾಂಕ್ ಸಿಬ್ಬಂದಿ ಲಾಗಿನ್ ಮೂಲಕ ಕರೆಂಟ್ ಅಕೌಂಟ್ನಿಂದ ತಮ್ಮ ಪತ್ನಿ ರೇವತಿ ಗೊರೆ ಹೆಸರಿನ ಖಾತೆಗೆ ಆರೋಪಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಸುಮಾರು 2.69 ಕೋಟಿ ಹಣವನ್ನು ಹೀಗೆ ಲಪಟಾಯಿಸಿದ್ದು, ಕೆಲ ದಿನಗಳ ಹಿಂದೆಯೇ ಬ್ಯಾಂಕಿಗೆ ಬರದೆ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.
ಬ್ಯಾಂಕ್ ಮ್ಯಾನೇರ್ರಿಂದ ದೂರು.. ಬ್ಯಾಂಕಿನ ಮ್ಯಾನೇಜರ್ ಅವರು ಅಸಿಸ್ಟೆಂಟ್ ಮ್ಯಾನೇಜರ್ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಅಲ್ಲದೇ ಬ್ಯಾಂಕಿನ ಖಾತೆಗಳನ್ನ ಪರಿಶೀಲಿಸಿದಾಗ ಆರೋಪಿತ ಕುಮಾರ್ ಬೋನಾಲ ಬ್ಯಾಂಕಿನಲ್ಲಿದ್ದ ಹಣ ಲಪಟಾಯಿಸಿ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವ ಖಾತೆಗೆ ಹಣವನ್ನ ವರ್ಗಾವಣೆ ಮಾಡಿಕೊಂಡಿದ್ದಾನೋ ಆ ಖಾತೆಯನ್ನ ಪರಿಶೀಲಸಿದಾಗ ಯಾವುದೇ ಹಣ ಇಲ್ಲದಿರುವುದು ತಿಳಿದಿದೆ.