ಕಾರವಾರ:ವಿಕಲಚೇತನರು ಮತದಾನದಿಂದ ವಂಚಿತರಾಗುವುದನ್ನು ತಪ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನಡೆಸಿದ ವಿಶೇಷ ಪ್ರಯತ್ನವೊಂದು ಫಲ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 97ರಷ್ಟು ವಿಕಲಚೇತನ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಅಂಕಿ-ಅಂಶಗಳಂತೆ ಜಿಲ್ಲೆಯ 13,009 ವಿಕಲಚೇತನ ಮತದಾರರ ಪೈಕಿ 11,798 ಮಂದಿ ಮಂಗಳವಾರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆ ಮೂಲಕ ಎಲ್ಲವೂ ಸರಿಯಿದ್ದೂ ಮತದಾನ ಮಾಡಲು ಹಿಂಜರಿಯುವ ಯುವಕರಿಗೆ ಮಾದರಿಯಾಗಿದ್ದಾರೆ.
ಫಲ ನೀಡಿತು ಗೂಗಲ್ ತಂತ್ರಾಂಶ:
ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿಕಲಚೇತನ ಮತದಾರರ ಮತದಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಪ್ಲಾನ್ ರೂಪಿಸಿತ್ತು. ಇದಕ್ಕಾಗಿ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಓ ಎಂ.ರೋಷನ್ ವಿಶೇಷ ಮುತುವರ್ಜಿ ವಹಿಸಿದ್ದರು. ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‍ಐಸಿ) ಸಹಯೋಗದಲ್ಲಿ ಗೂಗಲ್ ಮೂಲಕ ವಿಕಲಚೇತನ ಮತದಾರರ ವಿಳಾಸ ಪತ್ತೆ ಬಗ್ಗೆ ವಿನೂತನ ತಂತ್ರಾಂಶವನ್ನು ರೂಪಿಸಲಾಗಿತ್ತು.
ಜಿಲ್ಲೆಯಲ್ಲಿರುವ ವಿಕಲಚೇತನರು ಈಗಾಗಲೇ ವಿವಿಧ ಸೌಲಭ್ಯಗಳಿಗಾಗಿ ನೋಂದಣಿ ಮಾಡಿಕೊಂಡಿರುವುದರಿಂದ ಆ ಮಾಹಿತಿ ಪಡೆದು ಅವರ ಮನೆ ವಿಳಾಸ, ಮತಗಟ್ಟೆ ಸಂಖ್ಯೆ ಎಲ್ಲವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು. ಬಳಿಕ ಗೂಗಲ್ ಮ್ಯಾಪ್‌ನಲ್ಲಿ ಎಲ್ಲ ವಿಕಲಚೇತನ ಮತದಾರರ ಮನೆಗಳನ್ನು ಹಸಿರು ಬಣ್ಣದ ವೃತ್ತದಲ್ಲಿ ಗುರುತಿಸಲಾಗಿತ್ತು. ಅವರನ್ನು ಅಧಿಕಾರಿಗಳು ಮತಗಟ್ಟೆಗೆ ಕರೆತಂದಾಗ ಆ ವೃತ್ತ ನೀಲಿ ಬಣ್ಣದಿಂದ ಕಾಣಿಸುತ್ತಿತ್ತು. ಈ ಬಗ್ಗೆ ರೋಷನ್ ಅವರು ಕಚೇರಿಯಲ್ಲಿ ಕುಳಿತು ಗಮನಿಸುತ್ತಿದ್ದರು.
ಮತದಾನ ಮಾಡದ ವಿಕಲಚೇತನರ ಬಗ್ಗೆ ಮಾಹಿತಿ ಕ್ರೋಢೀಕರಿಸಿ, ಆಯಾ ಭಾಗದ ಅಧಿಕಾರಿಗಳಿಗೆ ಈ ಮಾಹಿತಿಯನ್ನು ರವಾನಿಸುತ್ತಿದ್ದರು. ಈ ಅಧಿಕಾರಿಗಳು ವಿಕಲಚೇತನರು ಮತದಾನ ಮಾಡಲು ಪ್ರೇರೇಪಿಸುತ್ತಿದ್ದರು. ಇದರಿಂದಲೇ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ವಿಕಲಚೇತನರು ಮತದಾನ ಮಾಡಲು ಸಾಧ್ಯವಾಯ್ತು ಎನ್ನಲಾಗ್ತಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೀತಿ ತಂತ್ರಾಂಶ ಅಳವಡಿಸಿಕೊಂಡು ಯಶಸ್ವಿಯಾಗಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.