ಕಾರವಾರ:ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಾಜಿ ಶಾಸಕ ಸತೀಶ್ ಸೈಲ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು, ಬಿಜೆಪಿಯಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಆದರೆ, ಚುನಾವಣೆ ಘೋಷಣೆಯಾಗಿ ವಾರ ಕಳೆದರೂ ಸುಮ್ಮನಿದ್ದ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಇದೀಗ ಕ್ಷೇತ್ರದಲ್ಲಿ ಓಡಾಟ ನಡೆಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಕ್ಷೇತ್ರದ ಚುನಾವಣಾ ಕಣ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಕಳೆದ ಬಾರಿ ಕಾಂಗ್ರೆಸ್ ಭದ್ರಕೋಟೆಯಂತಿದ್ದ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಂದಿನ ಶಾಸಕ ಸತೀಶ್ ಸೈಲ್ ಸ್ಪರ್ಧಿಸಿದ್ದರು. ಆದರೆ 45,071 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಕೊನೆ ಗಳಿಗೆಯಲ್ಲಿ ರಾಜಕೀಯಕ್ಕೆ ಬಂದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆನಂದ್ ಅಸ್ನೋಟಿಕರ್ 46,275 ಮತಗಳಿಂದ ಎರಡನೇ ಸ್ಥಾನ ಪಡೆದಿದ್ದರು. ಇಬ್ಬರನ್ನು ಹಿಂದಿಕ್ಕಿದ್ದ ರೂಪಾಲಿ ನಾಯ್ಕ 60,339 ಮತಗಳನ್ನು ಪಡೆದಿದ್ದರು. ಸುಮಾರು 15 ಸಾವಿರ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದ್ದರು.
ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರು..:ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶ ಪಡೆದಿದ್ದಾರೆ. 1952ರಲ್ಲಿ ಎಸ್.ಡಿ. ಗಾಂವಕರ್ (ಕಾಂಗ್ರೆಸ್), 1962ರಲ್ಲಿ ಬಿ.ಪಿ.ಕದಂ (ಎಂಇಎಸ್), 1967ರಲ್ಲಿ ಬಿ.ಪಿ.ಕದಂ (ಸ್ವತಂತ್ರ) ಜಯಗಳಿಸಿದ್ದರು. 1972ರಲ್ಲಿ ಬಿಪಿ ಕದಂ, 1978ರಲ್ಲಿ ವೈಗಂಣಕರ್ ದತ್ತಾತ್ರಯ ವಿಟ್ಟು, 1983, 1985 ಮತ್ತು 1989ರಲ್ಲಿ ಪ್ರಭಾಕರ್ ರಾಣೆ ಕಾಂಗ್ರೆಸ್ನಿಂದ ಗೆಲುವು ಕಂಡಿದ್ದರು.
1994ರಲ್ಲಿ ಕೆಸಿಪಿ ಗೆದ್ದಿದ್ದ ವಸಂತ ಅಸ್ನೋಟಿಕರ್, 1999ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜಯ ದಾಖಲಿಸಿದ್ದರು. 2004ರಲ್ಲಿ ಬಿಜೆಪಿಯಿಂದ ಗಂಗಾಧರ ಭಟ್ ಆಯ್ಕೆಯಾಗಿದ್ದರು. ನಂತರ 2008ರಲ್ಲಿ ಆನಂದ ಅಸ್ನೋಟಿಕರ್ ಮೂಲಕ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಇದೇ ವರ್ಷದ ಕಾಂಗ್ರೆಸ್ ತೊರೆದು ಆನಂದ ಅಸ್ನೋಟಿಕರ್ ಬಿಜೆಪಿ ಸೇರಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸತೀಶ ಸೈಲ್ ಗೆಲುವು ಸಾಧಿಸಿದ್ದರು. ಕಳೆದ 2018ರ ಚುನಾವಣೆಯಲ್ಲಿ ರೂಪಾಲಿ ನಾಯ್ಕ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.
ಟಿಕೆಟ್ ಸಿಕ್ಕರೂ ಪ್ರಚಾರದಲ್ಲಿ ಹಿಂದೆ ಬಿದ್ದ ಕಾಂಗ್ರೆಸ್:ಈ ಬಾರಿ ಮಾಜಿ ಶಾಸಕ ಸತೀಶ್ ಸೈಲ್‌ಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ನಿರೀಕ್ಷೆ ಇದ್ದರೂ ಬಹಿರಂಗವಾಗಿ ಅಷ್ಟೊಂದು ಪ್ರಚಾರ ನಡೆಸದ ಸೈಲ್ ಇದೀಗ ಓಡಾಟ ಚುರುಕುಗೊಳಿಸಿದ್ದಾರೆ. ಕಾರವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆದು ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಮತಬೇಟೆ ಆರಂಭಿಸಿದ್ದಾರೆ. ಆದರೆ, ಈವರೆಗೂ ಯಾವುದೇ ದೊಡ್ಡ ಮಟ್ಟದ ಸಭೆ ಸಮಾರಂಭ ನಡೆಸಿಲ್ಲ. ರಾಜ್ಯ ನಾಯಕರು ಕೂಡ ಕ್ಷೇತ್ರಕ್ಕೆ ಆಗಮಿಸಿಲ್ಲ ಎಂಬ ಮಾತುಗಳು ಪಕ್ಷದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿವೆ. ಕಾಂಗ್ರೆಸ್ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಚೈತ್ರಾ ಕೊಠಾರ್ಕರ ನಿಲ್ಲುವುದಾಗಿ ಪ್ರಕಟಿಸಿದ್ದಾರೆ.