ಕಾರವಾರ: ರಾಜ್ಯವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾರವಾರದಲ್ಲಿ ರಾಜಕೀಯ ವಿದ್ಯಮಾನಗಳು ಚುರುಕುಗೊಂಡಿವೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ನಲ್ಲಿ ದೊಡ್ಡ ವೋಟ್ ಬ್ಯಾಂಕ್ ಆಗಿದ್ದ ಮೀನುಗಾರ ಸಮುದಾಯದವರು 'ಕೈ' ಬಿಟ್ಟು ಇದೀಗ ಕಮಲ ಹಿಡಿದಿದ್ದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಪ್ರತಿಭಟನೆ ನಡೆಸಿದವರೇ ಈಗ ಬಿಜೆಪಿಗೆ ಸೇರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ 'ಸಾಗರ ಮಾಲ ಯೋಜನೆ'ಯಡಿ ಬಂದರು ವಿಸ್ತರಣೆ ಕಾಮಗಾರಿಗೆ ಸರ್ಕಾರ ಮುಂದಾಗಿತ್ತು. ಇದೇ ಮೀನುಗಾರ ಯುವಕರು ಹಾಗೂ ಮಹಿಳೆಯರು ಬಿಜೆಪಿ ಹಾಗೂ ಶಾಸಕಿ ರೂಪಾಲಿ ನಾಯ್ಕ ವಿರುದ್ದ ಪ್ರತಿಭಟನೆಗೆ ನಡೆಸಿದ್ದರು. ಶಾಸಕಿ ವಿರುದ್ಧ ಮನಬಂದಂತೆ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಬದಲಾಗಿ ರಾಜಕೀಯ ಸನ್ನಿವೇಶದಲ್ಲೀಗ ಬಿಜೆಪಿ ಸೇರ್ಪಡೆಯಾಗಿರುವುದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಬಿಜೆಪಿ ಶಾಸಕಿಯನ್ನು ತೆಗಳಿ, ಈಗ ಅವರದ್ದೇ ಪಕ್ಷಕ್ಕೆ ಸೇರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸುತ್ತಿದ್ದಾರೆ. ಬಿಜೆಪಿ ಸೇರಿದ ಮೀನುಗಾರ ಮಹಿಳೆಯರು, ಯುವಕರು ನಿಂದನೆ ಮಾಡಹೊರಟವರ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
"ಈ ಹಿಂದೆ ಸಾಗರ ಮಾಲಾ ಹೋರಾಟ ಸಂದರ್ಭದಲ್ಲಿ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಬಿಜೆಪಿ ನಾಯಕರನ್ನು ಟೀಕಿಸಿ ಅವರ ವಿರುದ್ಧ ಎಲ್ಲರೂ ಘೋಷಣೆ ಕೂಗಿದ್ದರು. ಆ ಬಳಿಕ ಶಾಸಕಿ ಬಳಿ ತೆರಳಿ ಆಕ್ರೋಶದಲ್ಲಿ ಮಾತನಾಡಿದವರು ಕ್ಷಮೆ ಕೇಳಿದ್ದಾರೆ. ಆದರೆ ಇದೀಗ ಹಳೆ ವಿಡಿಯೋ ವೈರಲ್ ಮಾಡುತ್ತಿದ್ದು ಇದರ ವಿರುದ್ದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ" ಎಂದು ಪಕ್ಷಾಂತರಗೊಂಡಿರುವ ಯುವ ಮೀನುಗಾರ ಸಂಘಟನೆ ಅಧ್ಯಕ್ಷ ಚೇತನ್ ಹರಿಕಂತ್ರ ತಿಳಿಸಿದರು.