ಕಾರವಾರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರೆಕೊಟ್ಟಿರುವ ಲಾಕ್ಡೌನ್ಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಅವಶ್ಯವಿರುವ ಹಾಲು, ತರಕಾರಿ, ಕಿರಾಣಿ ಅಂಗಡಿಗಳನ್ನು ತೆರೆಯಲಾಗಿದೆ. ಆದರೆ ಕೆಲ ಬೇಕರಿ ಮಾಲೀಕರು ಬೆಳಗ್ಗೆಯೇ ಅಂಗಡಿಗಳನ್ನು ತೆರೆದಿದ್ದು, ಅಕ್ಕ ಪಕ್ಕದ ಅಂಗಡಿಗಳು ಬಂದ್ ಆಗಿರುವುದನ್ನು ನೋಡಿ ಮತ್ತೆ ಅವರು ಸಹ ಬಾಗಿಲು ಮುಚ್ಚಿದರು.
ಲಾಕ್ಡೌನ್ಗೆ ಕಾರವಾರದಲ್ಲಿ ಜನ ಬೆಂಬಲ ಉಳಿದಂತೆ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿದೆ. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಆದರೆ ಅಲ್ಲಲ್ಲಿ ಆಟೋಗಳು ಸಂಚಾರ ನಡೆಸಿದ್ದು, ಹೂವು ಹಣ್ಣಿನ ಅಂಗಡಿಗಳನ್ನು ಸಹ ತೆರೆಯಲಾಗಿದೆ.
ಕೊರೊನಾ ವೈರಸ್ ತಡೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್, ಜನರು ಸ್ವಯಂ ಪ್ರೇರಿತರಾಗಿ ಸೋಂಕು ತಡೆಯಲು ಸಹಕಾರ ನೀಡಬೇಕು. ಅನಾವಶ್ಯಕವಾಗಿ ಓಡಾಡಬಾರದು, ಅವಶ್ಯವಲ್ಲದ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದ್ದರು. ಅಲ್ಲದೇ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.