ಕಾರವಾರ: ಮತ್ಸ್ಯಕ್ಷಾಮ, ಹವಾಮಾನ ವೈಪರಿತ್ಯದಿಂದಾಗಿ ಇತ್ತೀಗೆಚೆ ಮೀನುಗಾರಿಕೆ ನಡೆಸುವುದೇ ದೊಡ್ಡ ಸವಾಲಾಗಿದೆ. ಅದೆಷ್ಟೋ ಮೀನುಗಾರರು ಹಾಕಿದ ಬಂಡವಾಳ ಸಿಗದೇ ಬರಿಗೈಯ್ಯಲ್ಲಿ ವಾಪಸ್ ಆದ ಘಟನೆಗಳು ಕೂಡ ನಡೆದಿದೆ. ಆದರೆ, ಇದೀಗ ಮೀನುಗಾರ ಮಹಿಳೆಯರು ರಾಜ್ಯದಲ್ಲಿಯೇ ಪ್ರಥಮವಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಹೊಸ ಪ್ರಯತ್ನವೊಂದಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಹೌದು, ಕಳೆದ ಎರಡ್ಮೂರು ವರ್ಷಗಳಿಂದ ಮತ್ಸ್ಯಕ್ಷಾಮ, ಕೊರೊನಾ, ಹವಮಾನ ವೈಪರೀತ್ಯ ಹೀಗೆ ಒಂದಲ್ಲಾ ಒಂದು ಸಮಸ್ಯೆಗಳಿಂದಾಗಿ ಮೀನುಗಾರರು ಮೀನುಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಸಾಲ ಮಾಡಿ ಲಕ್ಷಾಂತರ ರೂ. ಕರ್ಚು ಮಾಡಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಿಂಗಳುಗಳ ಕಾಲ ಆಳ ಸಮುದ್ರದಲ್ಲಿ ಸುತ್ತಾಡಿದರೂ ಕೂಡ ಡಿಸೇಲ್ ರೇಟ್ ಸಹ ಹುಟ್ಟದ ಕಾರಣ ಅದೆಷ್ಟೋ ಬೋಟ್ಗಳು ಇಂದಿಗೂ ಲಂಗರು ಹಾಕಿಕೊಂಡಿವೆ.
ಮಾತ್ರವಲ್ಲದೇ, ಮೀನುಗಾರಿಕೆ ಜೊತೆಗೆ ಕಡಲತೀರಗಳಲ್ಲಿ ಬಳಚು, ತಿಸರೇ ಹೆಕ್ಕಿ ತೆಗೆದು ಒಂದಿಷ್ಟು ಸಂಪಾದನೆ ಮಾಡಿಕೊಳ್ಳುತ್ತಿದ್ದ ಮಹಿಳೆಯರ ಉದ್ಯೋಗಕ್ಕೂ ಇದೀಗ ಕೊಕ್ಕೆ ಬಿದ್ದಿದೆ.
ಈ ಎಲ್ಲ ಸಮಸ್ಯೆಗಳಿಂದಾಗಿ ಸಂಕಷ್ಟದ ಜೀವನ ನಡೆಸುತ್ತಿರುವ ಮೀನುಗಾರರ ಪೈಕಿ, ಕಾರವಾರದ ನಂದನಗದ್ದಾದ ಮೀನುಗಾರ ಮಹಿಳೆಯರು ನೀಲಿಕಲ್ಲು ಕೃಷಿಗೆ ( (Blue Stone Farming) ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (pradhan mantri matsya sampada yojana) ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.