ಕಾರವಾರ: ಜೂ.25ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಕಾರವಾರದಲ್ಲಿ ಪಕ್ಕದ ಗೋವಾ ರಾಜ್ಯದಿಂದಲೂ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆಯಲಿದ್ದಾರೆ.
ಗೋವಾದ ವಿದ್ಯಾರ್ಥಿಗಳಿಗೆ ಅಲ್ಲಿಯೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿ: ಗ್ರಾಮಸ್ಥರ ಮನವಿ - ಕಾರವಾರ ಗ್ರಾಮಸ್ಥರ ಮನವಿ
ಕೊರೊನಾ ಪ್ರಕರಣಗಳಿಂದಾಗಿ ಆತಂಕಿತರಾದ ಕಾರವಾರದ ಕೆಲ ಗ್ರಾಮಸ್ಥರು ಗೋವಾದಲ್ಲಿಯೇ ಪರೀಕ್ಷಾ ಕೇಂದ್ರ ತೆರೆದು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
![ಗೋವಾದ ವಿದ್ಯಾರ್ಥಿಗಳಿಗೆ ಅಲ್ಲಿಯೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿ: ಗ್ರಾಮಸ್ಥರ ಮನವಿ Karavar villagers appeal](https://etvbharatimages.akamaized.net/etvbharat/prod-images/768-512-7629471-803-7629471-1592230560337.jpg)
ಆದರೆ ಗೋವಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಆತಂಕಿತರಾದ ಕಾರವಾರದ ಕೆಲ ಗ್ರಾಮಸ್ಥರು ಗೋವಾದಲ್ಲಿಯೇ ಪರೀಕ್ಷಾ ಕೇಂದ್ರ ತೆರೆದು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಆತಂಕದ ನಡುವೆಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಜೂ.25 ರಿಂದ ಜು. 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಅದರಂತೆ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆಯನ್ನು ಸೂಸುತ್ರವಾಗಿ ನಡೆಸಲು ಅಂತಿಮ ಹಂತದ ಸಿದ್ದತೆ ನಡೆಸಿದೆ. ಆದರೆ ಗೋವಾದಲ್ಲಿ ಕರ್ನಾಟಕದ ಪಠ್ಯಕ್ರಮ ಅಭ್ಯಸಿಸುತ್ತಿರುವ 2 ಪ್ರೌಢಶಾಲೆಯ ಒಟ್ಟು 54 ವಿದ್ಯಾರ್ಥಿಗಳು ಗಡಿಜಿಲ್ಲೆ ಕಾರವಾರದ ಉಳಗಾ ಶಿವಾಜಿ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇವರೊಂದಿಗೆ 196 ಸ್ಥಳೀಯ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲಿದ್ದಾರೆ.
ಗೋವಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆ ನಮ್ಮ ಮಕ್ಕಳಿಗೂ ಸೋಂಕು ಹರಡುವುದೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಗೋವಾ ಮಕ್ಕಳಿಗೆ ಅಲ್ಲಿನ ಪ್ರೌಢಶಾಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ರೆ ಮಕ್ಕಳಿಗೂ ಅನುಕೂಲವಾಗುತ್ತದೆ. ಅಲ್ಲದೆ ನಮ್ಮ ಮಕ್ಕಳಿಗಿರುವ ಆತಂಕ ಕೂಡ ದೂರಾಗುತ್ತದೆ. ಕೂಡಲೇ ಜಿಲ್ಲಾಡಳಿತ ಇಲ್ಲವೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಗ್ರಾಮದಲ್ಲಿ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸದ ಗ್ರಾಮಸ್ಥರು, ಗೋವಾ ವಿದ್ಯಾರ್ಥಿಗಳಿಗೆ ಉಳಗಾ ಪರೀಕ್ಷಾ ಕೇಂದ್ರದ ಬದಲು ಗೋವಾದಲ್ಲಿಯೇ ಪರೀಕ್ಷಾ ಕೇಂದ್ರ ತೆರೆದು ಪರೀಕ್ಷೆ ಬರೆಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು, ನಾವು ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದ್ದೇವೆ. ಭಯ ಪಡುವ ಅಗತ್ಯ ಇಲ್ಲ. ಗೋವಾ-ಕರ್ನಾಟಕ ಎಂದು ಬೇರೆ ಮಾಡುವುದು ಸರಿಯಲ್ಲ. ನಾವೆಲ್ಲರೂ ಭಾರತೀಯರು. ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಎಲ್ಲೆಂದರಲ್ಲಿ ಮಾಡಲು ಸಾಧ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.