ಕಾರವಾರ: ರಾಜ್ಯ ಸರ್ಕಾರ ಹೆಣ್ಣುಮಕ್ಕಳ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲು ಮುಂದಾಗಿದೆ. ವೀರ ವನಿತೆ ಓಬವ್ವ ಹೆಸರಿನಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ತರಬೇತಿ ನಡೆಯುತ್ತಿದ್ದು, ಉತ್ತರಕನ್ನಡ ಜಿಲ್ಲೆಯ 2,944 ಯುವತಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲು ಸರ್ಕಾರ ಮುಂದಾಗಿದೆ. ಸಂಭಾವ್ಯ ಅಪಾಯವನ್ನು ಎದುರಿಸಿ, ಸ್ವಯಂ ರಕ್ಷಣೆ ಪಡೆದುಕೊಳ್ಳಲು ಸಹಕಾರಿಯಾಗುವಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಓಬವ್ವ ಆತ್ಮರಕ್ಷಣಾ ಕಲೆ ಕೌಶಲ್ಯಗಳ ತರಬೇತಿ ನೀಡಲಾಗುತ್ತಿದೆ. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಂಗಳವಾರ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು.
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಮತ್ತು ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಣ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 1,704 ಶಾಲೆಗಳಲ್ಲಿ 1.82 ಲಕ್ಷ ವಿದ್ಯಾರ್ಥಿನಿಯರು ತರಬೇತಿ ಪಡೆಯಲಿದ್ದಾರೆ. ಪ್ರತಿ ಮನೆಗಳಲ್ಲಿ ಓಬವ್ವನಂತಹ ಹೆಣ್ಣುಮಕ್ಕಳು ಸೃಷ್ಟಿಯಾಗಬೇಕು ಎನ್ನುವ ಉದ್ದೇಶದೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಬ್ಲಾಕ್ ಬೆಲ್ಟ್ ಪಡೆದ ಹೆಣ್ಣುಮಕ್ಕಳನ್ನು ತರಬೇತಿಗೆ ನಿಯೋಜಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.