ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮಳೆಗಾಲದ ವೇಳೆ ಎದುರಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಹಲವು ಗ್ರಾಮದ ಜನರು ಪರದಾಡುವಂತಾಗಿತ್ತು.
ಅದರಲ್ಲೂ ಯಲ್ಲಾಪುರ ತಾಲೂಕಿನ ಕಳಚೆ ಅನ್ನೋ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಇಡೀ ಊರಿನ ಹಲವೆಡೆ ತೋಟ, ಮನೆ, ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಮಣ್ಣಿನಲ್ಲಿ ಕೊಚ್ಚಿ ಹೋಗಿ ಜನರು ಆತಂಕದಲ್ಲಿದ್ದರು. ಸದ್ಯ ಗ್ರಾಮಸ್ಥರು ಮತ್ತೆ ಜೀವನ ಕಟ್ಟಿಕೊಳ್ಳುತ್ತಿದ್ದು, ಇದರ ನಡುವೆ ಮತ್ತೆ ಗುಡ್ಡ ಕುಸಿತವಾಗಿರುವುದು ಜನರನ್ನ ಇನ್ನಷ್ಟು ಆತಂಕಕ್ಕೆ ದೂಡಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಳಚೆ ಬಳಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.. ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ 2021ರ ಜುಲೈ ತಿಂಗಳಿನಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಯಿಂದ ಹಲವಾರು ಗ್ರಾಮದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಜುಲೈ ಕೊನೆಯ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಯಲ್ಲಾಪುರದಿಂದ ಕಳಚೆ ಗ್ರಾಮವನ್ನ ಸಂಪರ್ಕಿಸುವ ರಸ್ತೆಯೇ ಕುಸಿದು ಹೋಗಿದ್ದು, ದೊಡ್ಡ ಧರೆಯೇ ಕಳಚಿ ಬಿದ್ದಿತ್ತು. ಪರಿಣಾಮ 200ಕ್ಕೂ ಅಧಿಕ ಕುಟುಂಬಗಳಿದ್ದ ಗ್ರಾಮಕ್ಕೆ ಸಂಪರ್ಕವೇ ಕಡಿತಗೊಂಡಿತ್ತು.
ಗ್ರಾಮದ ದೇವಸ್ಥಾನದ ಉಪಾದಿಭಟ್ಟರ ಮನೆಗೆ ತೆರಳುವ ಹಳ್ಳದ ಸಮೀಪ ಗುಡ್ಡ ಕುಸಿದು 30 ರಿಂದ 40 ಅಡಿಕೆ ಗಿಡಗಳು ಕೊಚ್ಚಿ ಹೋಗಿವೆ. ಮಳೆ ಇಲ್ಲದಿದ್ದರೂ ಏಕಾಏಕಿ ಗುಡ್ಡ ಕುಸಿತವಾಗಿರುವುದು ಇದೀಗ ಗ್ರಾಮದ ಜನರಲ್ಲಿ ಮತ್ತೆ ಆತಂಕವನ್ನ ಹುಟ್ಟಿಸಿದೆ.
ಕಳೆದ ಬಾರಿ ಗುಡ್ಡ ಕುಸಿತವಾಗಿ ಅಪಾರ ಹಾನಿಯಾದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮರುದಿನವೇ ಸಿಎಂ ಬಸವರಾಜ ಬೊಮ್ಮಾಯಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರನ್ನ ಬೇರೆಡೆ ಸ್ಥಳಾಂತರ ಮಾಡಲು ಆದೇಶಿದ್ದರು.
ಆದರೆ, ಇದುವರೆಗೂ ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆ ಗ್ರಾಮಸ್ಥರು ಮತ್ತೆ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಹೀಗಾಗಿ, ಮತ್ತೆ ಮಳೆಗಾಲ ಪ್ರಾರಂಭವಾದರೆ ಇದೇ ರೀತಿ ದೊಡ್ಡ ಮಟ್ಟದಲ್ಲಿ ಹಾನಿಯಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಪೂರ್ಣ.. ತೀರ್ಪು ಕಾಯ್ದಿರಿಸಿದ ಹೈಕೋರ್ಟ್