ಶಿರಸಿ (ದ.ಕ):ಭಾರತದ ಪೂರ್ವ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆಂದು ನಂಬಲಾಗಿದ್ದ ಅಪರೂಪದ ಕಳಿಂಗ ಕಪ್ಪೆ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ ಶಿರಸಿ ತಾಲೂಕಿನ ವರ್ಗಾಸರದ ಅಮಿತ್ ಹೆಗಡೆ ಹಾಗೂ ತಂಡ ಈ ಪತ್ತೆ ಕಾರ್ಯ ನಡೆಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ‘ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿಶಾಸ್ತ್ರ ವಿಭಾಗ’ದಲ್ಲಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿರುವ ಇವರು ಪ್ರೊ. ಗಿರೀಶ್ ಕಾಡದೇವರು ಅವರ ಮಾರ್ಗದರ್ಶನದಲ್ಲಿ ಹಾಗೂ ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ZSI) ವಿಜ್ಞಾನಿ ಕೆ.ಪಿ. ದಿನೇಶ್ ಅವರ ಸಹಯೋಗದಲ್ಲಿ ಈ ಕಪ್ಪೆಯನ್ನು ಪತ್ತೆಹಚ್ಚಿದ್ದಾರೆ.
ಶಿರಸಿ ಭಾಗದಲ್ಲಿ ಈ ವಿಶಿಷ್ಟ ತಳಿಯ ಕಪ್ಪೆ ಪತ್ತೆಯಾಗಿದ್ದು, ಜೀವವೈವಿಧ್ಯ-ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಈ ಸಂಶೋಧನೆಯು ಕೇವಲ ಒಂದು ಶ್ರೇಣಿಯ ವಿಸ್ತರಣೆಯಲ್ಲ, ಆದರೆ ಇದು ರೂಪವಿಜ್ಞಾನದಲ್ಲಿ ಸಂಪೂರ್ಣವಾಗಿ ಭಿನ್ನವಾಗಿ ಕಾಣುವಂತಹ ಶೋಧ ಕಾರ್ಯವಾಗಿದೆ. ಈ ಕಪ್ಪೆಯನ್ನು ಪೃದ್ವಿ ನೇತೃತ್ವದ ಸಂಶೋಧಕರ ತಂಡದಿಂದ 2018ರಲ್ಲಿ ಪೂರ್ವ ಘಟ್ಟದ ಉತ್ತರ ಭಾಗವಾದ ಓಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಲಾಗಿತ್ತು.
ಇದು ಪೂರ್ವ ಘಟ್ಟದಲ್ಲಿ ಮಾತ್ರ ಕಂಡುಬರುವ ಪ್ರಭೇದ ಎಂಬ ನಂಬಿಕೆ ಈವರೆಗೂ ಇತ್ತು. ಅಚ್ಚರಿ ಎಂಬಂತೆ ಈ ಕಳಿಂಗ ಜಾತಿಯ ಕಪ್ಪೆ ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.