ಕರ್ನಾಟಕ

karnataka

ETV Bharat / state

ಕಾಳಿ ನದಿ ಮಲಿನಗೊಳ್ಳುತ್ತಿರುವುದನ್ನು ತಡೆಯಲು ಮುಂದಾದ ಕಾರವಾರ ನಗರಸಭೆ: 29 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧ - National Green Tribunal

ಕೆಲ ವರ್ಷಗಳ ಹಿಂದೆ ಅಧ್ಯಯನ ಮಾಡಿದ್ದ ತಂಡವೊಂದು ಕಾಳಿ ನದಿ(Kali River) ನೀರು ಮಲಿನಗೊಂಡಿರುವುದಾಗಿ ವರದಿ ನೀಡಿತ್ತು. ಅಲ್ಲದೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(National Green Tribunal) ಗುರುತಿಸಿರುವ ಕಲುಷಿತಗೊಂಡ 17 ನದಿಗಳ ಪಟ್ಟಿಯಲ್ಲಿ ಕಾಳಿ ನದಿಯನ್ನು ಸಹ ಸೇರ್ಪಡೆಗೊಳಿಸಿದೆ. ಈ ನಿಟ್ಟಿನಲ್ಲಿ ಕಾಳಿ ನದಿಗೆ ತ್ಯಾಜ್ಯ ಸೇರುವುದನ್ನ ತಪ್ಪಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 29 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆಯೊಂದನ್ನ ರೂಪಿಸಿದೆ.

karwar
ಕಾಳಿ ನದಿ

By

Published : Nov 17, 2021, 12:36 PM IST

ಕಾರವಾರ: ಕಾಳಿ ನದಿ (Kali River) ಉತ್ತರ ಕನ್ನಡದ ಜೀವ ನದಿ. ಕೃಷಿ, ಮೀನುಗಾರಿಕೆ ಸೇರಿದಂತೆ ಹತ್ತು ಹಲವು ವಿಧದಲ್ಲಿ ಜೀವನಾಡಿಯಾಗಿ ಜಿಲ್ಲೆಯ ಜನರಿಗೆ ಆಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ನಿರ್ಲಕ್ಷ್ಯದಿಂದಾಗಿ ನಗರದ ತ್ಯಾಜ್ಯ ನದಿಗೆ ಸೇರುತ್ತಿದ್ದುದರಿಂದ ಕಾಳಿ ಮಲಿನಗೊಳ್ಳುವಂತಾಗಿತ್ತು. ಈ ನಿಟ್ಟಿನಲ್ಲಿ ಕಾಳಿ ನದಿಯನ್ನು ಶುದ್ಧವಾಗಿಡಲು ಕಾರವಾರ ನಗರಸಭೆ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಕಾಳಿ ನದಿ ಮಲಿನಗೊಳ್ಳುತ್ತಿರುವುದನ್ನು ತಡೆಯಲು ಮುಂದಾದ ಕಾರವಾರ ನಗರಸಭೆ..

ಜೋಯಿಡಾ ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹುಟ್ಟಿ, ಕಾರವಾರದಲ್ಲಿ ಸಮುದ್ರವನ್ನ ಸೇರುವ ಕಾಳಿ ನದಿಗೆ ನಿರ್ಮಿಸಲಾಗಿರುವ 5 ಜಲಾಶಯಗಳಿಂದ ಒಂದೆಡೆ ವಿದ್ಯುತ್ ಉತ್ಪಾದನೆಯಾದರೆ, ಇನ್ನೊಂದೆಡೆ ಕೃಷಿ, ಮೀನುಗಾರಿಕೆ, ಕುಡಿಯುವ ನೀರು ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಜಿಲ್ಲೆಯ ಜನರ ಜೀವನಾಡಿಯಾಗಿದೆ.

ನಗರದ ತ್ಯಾಜ್ಯದಿಂದ ಮಲಿನಗೊಳ್ಳುತ್ತಿರುವ ನದಿ:

ನದಿ ನೀರನ್ನೇ ಅವಲಂಭಿಸಿಕೊಂಡು ಸಾವಿರಾರು ಕುಟುಂಬಗಳು ನದಿ ಪಾತ್ರದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜತೆಗೆ ಪ್ರವಾಸೋದ್ಯಮಕ್ಕೂ ನೆರವಾಗಿದೆ. ಆದ್ರೆ ಇಂತಹ ಬಹುಪಯೋಗಿ ಕಾಳಿ ನದಿ ಇತ್ತೀಚಿನ ವರ್ಷಗಳಲ್ಲಿ ನಗರದ ತ್ಯಾಜ್ಯದಿಂದಾಗಿ ಮಲಿನಗೊಳ್ಳುವಂತಾಗಿದೆ. ನದಿ ಪಾತ್ರದಲ್ಲಿರುವ ನಗರ ಪ್ರದೇಶದ ಮನೆಗಳಿಂದ ತ್ಯಾಜ್ಯ ನೀರು ಕಾಳಿ ನದಿಗೆ ನೇರವಾಗಿ ಸೇರುತ್ತಿದ್ದು, ಪರಿಣಾಮ ಕಾಳಿ ನದಿ ಕಲುಷಿತಗೊಂಡಿದೆ. ಕೆಲ ವರ್ಷಗಳ ಹಿಂದೆ ಈ ಕುರಿತು ಅಧ್ಯಯನ ಮಾಡಿದ್ದ ತಂಡವೊಂದು ಕಾಳಿ ನದಿ ನೀರು ಮಲೀನಗೊಂಡಿರುವುದಾಗಿ ವರದಿ ನೀಡಿತ್ತು.

29 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ

ಅಲ್ಲದೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(National Green Tribunal) ಗುರುತಿಸಿರುವ ಕಲುಷಿತಗೊಂಡ 17 ನದಿಗಳ ಪಟ್ಟಿಯಲ್ಲಿ ಕಾಳಿ ನದಿಯನ್ನ ಸಹ ಸೇರ್ಪಡೆಗೊಳಿಸಿದೆ. ಈ ನಿಟ್ಟಿನಲ್ಲಿ ಕಾಳಿ ನದಿಗೆ ತ್ಯಾಜ್ಯ ಸೇರುವುದನ್ನ ತಪ್ಪಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 29 ಕೋಟಿ ವೆಚ್ಛದಲ್ಲಿ ಒಳಚರಂಡಿ ಯೋಜನೆಯೊಂದನ್ನ(Drainage Project) ರೂಪಿಸಿದೆ.

ಕಾರವಾರ ನಗರ ವ್ಯಾಪ್ತಿಯ ಕಾಳಿ ನದಿ ಪಾತ್ರದ ಹಲವು ಮನೆಗಳಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮನೆಯ ತ್ಯಾಜ್ಯ, ಶೌಚಾಲಯದ ನೀರನ್ನ ನೇರವಾಗಿ ನದಿಗೆ ಹರಿಸುತ್ತಿದ್ದಾರೆ. ಇದರಿಂದಾಗಿ ಕಾಳಿ ನದಿ (Kali River) ನೀರು ಮಲಿನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈ ಯೋಜನೆಯಡಿ ನದಿ ಪಾತ್ರದ ಮನೆಗಳಿಗೆ ಮೊದಲು ಸೂಕ್ತ ಒಳಚರಂಡಿ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ:

ಈ ಮೂಲಕ ಮನೆಗಳ ತ್ಯಾಜ್ಯ ನೀರನ್ನ ರಾಜಕಾಲುವೆಗೆ ಸಂಪರ್ಕಿಸಿ ನಂತರ ಅದನ್ನ ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಿಸಿ ಬೇರೆಡೆ ಬಿಡಲಾಗುತ್ತದೆ. ಇದರೊಂದಿಗೆ ತ್ಯಾಜ್ಯ ನೀರನ್ನ ನದಿಗೆ ಸೇರಿಸುವ ಮನೆಗಳಿಗೆ ಎಚ್ಚರಿಕೆ ನೀಡುವುದರ ಜತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರಸಭೆ ಸಿದ್ಧತೆ ನಡೆಸಿದ್ದು, ಈಗಾಗಲೇ ಯೋಜನೆ ಪ್ರಾರಂಭಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಕಾರವಾರ ನಗರಸಭೆ ಆಯುಕ್ತ ಆರ್.ಪಿ. ನಾಯ್ಕ ತಿಳಿಸಿದ್ದಾರೆ.

ಈ ಯೋಜನೆ ಕುರಿತು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಳಿ ನದಿ ಮಲೀನ ಮುಕ್ತವಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತ್ಯಾಜ್ಯ ಸೇರ್ಪಡೆಯಿಂದ ಮಲಿನಗೊಂಡಿದ್ದ ಜಿಲ್ಲೆಯ ಜನರ ಜೀವನಾಡಿ ಕಾಳಿ ಶುದ್ಧೀಕರಣಕ್ಕೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಜನರೂ ಸಹ ಜಾಗೃತರಾಗಿ ನದಿಗೆ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ.

ABOUT THE AUTHOR

...view details