ಕಾರವಾರ(ಉತ್ತರ ಕನ್ನಡ): ನಾಲ್ಕು ಅಣು ವಿದ್ಯುತ್ ಘಟಕಗಳನ್ನು ಹೊಂದಿರುವ ಉತ್ತರ ಕನ್ನಡದ ಕೈಗಾದಲ್ಲಿ ಮತ್ತೆರಡು ಘಟಕ ಸ್ಥಾಪನೆಗೆ ತಡೆ ಬಿದ್ದಿದೆ. ಐದು ಮತ್ತು ಆರನೇ ಅಣು ವಿದ್ಯುತ್ ಘಟಕ ಸ್ಥಾಪನೆಗೆ ನೀಡಿರುವ ಅನುಮೋದನೆಯನ್ನು ಅಮಾನತುಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠ ತಾತ್ಕಾಲಿಕ ತಡೆ ನೀಡಿದೆ.
ಪರಿಸರ ಸೂಕ್ಷ್ಮ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಸಾಕಷ್ಟು ವಿರೋಧದ ನಡುವೆಯೂ ಕೈಗಾ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತಿತ್ತು. ಆದರೆ, ಮತ್ತೆ ಹೆಚ್ಚುವರಿಯಾಗಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು ಅನುಮತಿ ನೀಡಿತ್ತು. ಇದಲ್ಲದೇ ಇದಕ್ಕೆ ಕೇಂದ್ರ ಸಚಿವ ಸಂಪುಟವು 2017ರಲ್ಲೇ ಅನುಮೋದಿಸಿದೆ.
ಕೈಗಾ 5 ಮತ್ತು 6ನೇ ಅಣು ವಿದ್ಯುತ್ ಘಟಕ ಅನುಮತಿ ಅಮಾನತ್ತು, ಮಾರಕ ಯೋಜನೆ ತಡೆಗೆ ಸ್ಥಳೀಯರಿಂದ ಹರ್ಷ ಪರಿಸರ ಸೂಕ್ಷ್ಮ ವಲಯ ಹಾಗೂ ಘಟಕದಿಂದ ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದಿಂದ ಇದಕ್ಕೆ ಸ್ಥಳೀಯ ಜನರು ಸಹ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ಐದು ಹಾಗೂ ಆರನೇ ಘಟಕಗಳಿಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯ ಪರಿಸರ ಅನುಮೋದನೆ ನೀಡಿತ್ತು.
ಹೀಗಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಆರೋಪಿಸಿ ‘ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕ ವಿರೋಧಿ ಹೋರಾಟ ಸಮಿತಿ’ಯು ಎನ್‌ಜಿಟಿ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಕೆ.ರಾಮಕೃಷ್ಣನ್ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನು ಒಳಗೊಂಡ ಪೀಠ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕಗಳಿಗೆ ನೀಡಿರುವ ಪರಿಸರ ಅನುಮೋದನೆಯನ್ನು ಅಮಾನತುಗೊಳಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠ ಆದೇಶ ಹೊರಡಿಸಿದೆ.
ಸೂಚನೆ : ಈ ಎರಡು ಘಟಕಗಳ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ಬರುತ್ತದೆಯೇ ಎಂಬುದನ್ನು ಸಚಿವಾಲಯ ಪರಿಶೀಲನೆ ನಡೆಸಬೇಕು. ಜೊತೆಗೆ, ಯೋಜನೆ ಅನುಷ್ಠಾನದಿಂದ ಕೈಗಾ ಗ್ರಾಮದ ಮೇಲೆ ಏನಾದರೂ ಪರಿಣಾಮ ಆಗಲಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಆರು ತಿಂಗಳ ಅಧ್ಯಯನ ನಡೆಸ ಬೇಕು : ಘಟಕಗಳ ಆರಂಭದಿಂದ ಕಾಳಿ ನದಿ, ಅದರ ಅಣೆಕಟ್ಟಿನ ಮೇಲಾಗುವ ಪರಿಣಾಮ, ನೀರಿನ ಲಭ್ಯತೆ, ನದಿ ತೀರದ ಜನರ ಮೇಲಾಗುವ ಪರಿಣಾಮಗಳ ಕುರಿತ ಅಧ್ಯಯನ ವರದಿಯನ್ನು ಸಲ್ಲಿಸಬೇಕು. ಈ ಯೋಜನೆಯಿಂದ ಪರಿಸರ ಸೂಕ್ಷ್ಮ ಪ್ರದೇಶದ ಮೇಲಾಗುವ ತೊಂದರೆ, ಘಟಕಗಳಿಂದ ಬರುವ ಅಣು ವಿಕಿರಣಗಳಿಂದ ಜನರ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆಯೂ ಅಧ್ಯಯನ ವರದಿ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಬಳಿಕ ಒಂದು ತಿಂಗಳಲ್ಲಿ ಪರಿಸರ ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ತೀರ್ಮಾನಿಸಬೇಕು ಎಂದೂ ಪೀಠ ತಿಳಿಸಿದೆ.
ಪರಿಸರ ಸೂಕ್ಷ್ಮ ಪ್ರದೇಶ : ಕೈಗಾ ಅಣುಸ್ಥಾವರದಿಂದಾಗಿ ಕೈಗಾ ಸುತ್ತಮುತ್ತಲ ಪ್ರದೇಶದ ಗ್ರಾಮದ ಜನರಿಗೆ ಇದರ ವಿಕಿರಣದಿಂದಾಗಿ ಕ್ಯಾನ್ಸರ್ ರೋಗ ಹೆಚ್ಚಾಗಿದೆ. ಇದಲ್ಲದೇ ಇಲ್ಲಿ ಹರಿಯುವ ಕಾಳಿ ನದಿ ನೀರು ವಿಕಿರಣದಿಂದ ಕುಡಿಯಲು ಸಹ ಯೋಗ್ಯವಾಗಿರದ ಪರಿಸ್ಥಿತಿಯಲ್ಲಿದ್ದು ಜಲಚರಗಳಿಗೂ ಪರಿಣಾಮ ಬೀರುತ್ತಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳು ನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದಲ್ಲೇ 20,668 ಚದರ ಕಿ.ಮೀ. ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮವೆಂದು ಗುರುತಿಸಲಾಗಿದೆ. ಕೈಗಾ ಗ್ರಾಮ ಸಹ ಪರಿಸರ ಸೂಕ್ಷ್ಮ ಪ್ರದೇಶದೊಳಗೆ ಸೇರಿಕೊಂಡಿದೆ. ಇನ್ನು ಐದು ಆರನೇ ಘಟಕ ನಿರ್ಮಾಣವಾದರೇ ಅಪಾರ ಪ್ರಮಾಣದ ಕಾಡು ನಾಶವಾಗುವುದಲ್ಲದೇ ಪ್ರಾಣಿ ಪಕ್ಷಿಗಳಿಗೂ ಹಾನಿಯಾಗುತ್ತದೆ. ಈ ಯೋಜನೆಯಿಂದ ಕರ್ನಾಟಕದ ಜನರಿಗೆ ಉಪಯೋಗವಿಲ್ಲ. ಸ್ಥಳೀಯ ಜನರಿಗೂ ಉದ್ಯೋಗ ಸಿಗುತ್ತಿಲ್ಲ. ಪರಿಸರಕ್ಕೆ ಮಾರಕವಾದ ಈ ಯೋಜನೆಗೆ ಹಸಿರು ಪೀಠ ತಡೆ ನೀಡಿರುವುದು ಸ್ವಾಗತಾರ್ಹ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕ :ಕೈಗಾ ದಲ್ಲಿ ಒಟ್ಟು ₹ 21 ಸಾವಿರ ಕೋಟಿ ವೆಚ್ಚದ ಘಟಕ ನಿರ್ಮಣ ಯೋಜನೆ ಇದಾಗಿದ್ದು ಇಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು ಅನುಮತಿ ನೀಡಿದೆ. ಈ ಘಟಕಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಕೈಗಾದಲ್ಲಿ ಒಟ್ಟು 2,280 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
ಪ್ರಸ್ತುತ ತಲಾ 220 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 880 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಹೀಗಾಗಿ ಪರಿಸರಕ್ಕೆ ಮಾರಕವಾದ ಈ ಯೋಜನೆಯನ್ನು ಮತ್ತೆ ಪ್ರಾರಂಭಿಸಬಾರದು ಎಂಬುದು ಸ್ಥಳೀಯ ಜನರ ಆಗ್ರಹವಾಗಿದೆ.
ಇದನ್ನೂ ಓದಿ :ಮಳೆ ನೀರಿನಿಂದ ವಿದ್ಯುತ್ ಉತ್ಪಾದನೆ: ತುಳಗೇರಿ ಗ್ರಾಮಸ್ಥರ ವಿನೂತನ ಯೋಜನೆ