ಕಾರವಾರ: ಗುಡ್ಡಗಾಡುಗಳಲ್ಲಿ ವಾಸಿಸುವವರಿಗೆ ಗೆಡ್ಡೆ ಗೆಣಸುಗಳೇ ಪ್ರಮುಖ ಆಹಾರ, ಇದಕ್ಕೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಜೋಯಿಡಾದಲ್ಲಿ ಆಯೋಜಿಸಿದ್ದ ಗೆಣಸು ಮೇಳವೊಂದು ಎಲ್ಲರ ಗಮನ ಸೆಳೆದಿದ್ದು, ಮೇಳದಲ್ಲಿ 50 ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಜೊಯಿಡಾದಲ್ಲಿ ಗಮನ ಸೆಳೆದ ಗೆಡ್ಡೆ ಗೆಣಸು ಮೇಳ...!
ಗುಡ್ಡಗಾಡುಗಳಲ್ಲಿ ವಾಸಿಸುವವರಿಗೆ ಗೆಡ್ಡೆ ಗೆಣಸುಗಳೇ ಪ್ರಮುಖ ಆಹಾರ, ಇದಕ್ಕೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಜೋಯಿಡಾದಲ್ಲಿ ಆಯೋಜಿಸಿದ್ದ ಗೆಣಸು ಮೇಳವೊಂದು ಎಲ್ಲರ ಗಮನ ಸೆಳೆದಿದ್ದು, ಮೇಳದಲ್ಲಿ 50 ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಜೊಯಿಡಾದ ಕುಣುಬಿ ಜನಾಂಗದವರು ಕಾಡು ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆದ ಅಪರೂಪದ ಗಡ್ಡೆಗೆಣಸುಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಜೊಯಿಡಾದಲ್ಲಿ ನಡೆಸುತ್ತಿರುವ ಗಡ್ಡೆ ಗೆಣಸು ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಹೆಸರು ಪಡೆದಿದೆ. ಮೇಳದಲ್ಲಿ 140ಕ್ಕೂ ಅಧಿಕ ಕೃಷಿಕರು 53 ಬಗೆಯ ಗೆಣಸುಗಳನ್ನು ಮೇಳದಲ್ಲಿ ಮಾರಾಟ ಮಾಡಿದರು. ಅಪರೂಪದಲ್ಲಿಯೇ ಅಪರೂಪವಾದ ಗೆಡ್ಡೆ- ಗೆಣಸು ಈ ಮೇಳದಲ್ಲಿ ಸಿಗುವುದರಿಂದ ಬೇರೆ ಬೇರೆ ಭಾಗಗಳಿಂದ ನೂರಾರು ಜನರು ಖರೀದಿಗಾಗಿ ಆಗಮಿಸಿದ್ದಾರೆ. ಗಡ್ಡೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವುದೇ ರೈತರಿಗೆ ದೊಡ್ಡ ಕೆಲಸ. ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಮಾರುಕಟ್ಟೆ ವ್ಯವಸ್ಥೆಗೆ ತರಲು ಪ್ರತಿ ವರ್ಷ ಜೊಯಿಡಾದಲ್ಲಿ ನಡೆಯುವ ಗಡ್ಡೆ ಗೆಣಸಿನ ಮೇಳ ವೇದಿಕೆ ಕಲ್ಪಿಸಿದೆ ಎನ್ನುವುದು ಇಲ್ಲಿಯ ಸ್ಥಳೀಯರ ಅಭಿಪ್ರಾಯವಾಗಿದೆ.
ಮೇಳದಲ್ಲಿ ಗೆಣಸುಗಳು ಮಾತ್ರವಲ್ಲದೇ ಬೆತ್ತದಿಂದ ತಯಾರಿಸಲಾದ ಮೊರ, ಚಾಪೆ, ಜೇನುತುಪ್ಪ, ವಾಟೆಹುಳಿ, ಶುಂಠಿ, ಅರಶಿನ ಕೊಂಬು, ಮೊಗೆಕಾಯಿ, ಈರುಳ್ಳಿ, ಕೆಂಪು ಗೆಣಸು, ಬಿಳಿ ಗೆಣಸು, ಮುಳ್ಳಿ, ಕೋನ್, ಜಾಡ ಕಣಗ, ಕಾಟೇ ಗಣಗ, ಕಾಸರಾಳು, ರಳದ್, ಮುಡ್ಲಿ, ಸವತೆ, ತೇರೋ, ಆನೆಬಾಳೆ, ಥೈಪಳ್, ಕರಂದೆ, ಕಣಗೆ, ಅಂಬಾಡಿ, ಕೆಸು, ಅಪ್ಪೆಮಿಡಿ, ಕೆಂಪು ಹರಿವೆ ಬೀಜ, ಮುಳ್ಳುಕೋನ, ಚಿಕ್ಕು, ಮೌವಳಿ, ಹಲಸು, ಎಲಕ್ಕಿ, ಮುರುಗಲು, ಬೆಟ್ಟದ ನೆಲ್ಲಿಕಾಯಿಗಳನ್ನು ತಂದು ಮಹಿಳೆಯರು ಮಾರಾಟ ಮಾಡಿದರು. ವಿಶೇಷ ಅಂದ್ರೆ ಮೇಳದಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಮನೆಯಿಂದ ಮಳಿಗೆವರೆಗೆ ಹೊತ್ತು ತರುವದು ಮಾತ್ರ ಪುರುಷರ ಕೆಲಸ. ಉಳಿದ ಎಲ್ಲಾ ಲೆಕ್ಕಾಚಾರಗಳನ್ನು ಇಲ್ಲಿ ಮಹಿಳೆಯರೇ ನಿಭಾಯಿಸುತ್ತಾರೆ.