ಕರ್ನಾಟಕ

karnataka

By

Published : Feb 20, 2021, 7:22 PM IST

ETV Bharat / state

ಹಾಡುವಳ್ಳಿಯಲ್ಲಿ ಬೀಡು ಬಿಟ್ಟ ಡಿಸಿ ನೇತೃತ್ವದ ತಂಡ : ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ!

ಬೆಳಗ್ಗೆಯಿಂದ ಆರಂಭಗೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಗ್ರಾಮಸ್ಥರು ಯಾವುದೇ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ..

Jilladhikarigalu nade halli kade campaign
'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ' ಕಾರ್ಯಕ್ರಮ

ಕಾರವಾರ :ವಾರದ ಹಿಂದೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಮುಲೈ ಮುಹಿಲಿನ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮಕ್ಕೆ ತೆರಳಿ ಸ್ಥಳೀಯರ ಕುಂದು ಕೊರತೆ ಆಲಿಸುವುದರ ಜೊತೆಗೆ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಿದೆ.

ಸರ್ಕಾರ ಜಾರಿಗೊಳಿಸಿರುವ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ" ಕಾರ್ಯಕ್ರಮದ ಹಿನ್ನೆಲೆ ಇಂದು ಹಾಡುವಳ್ಳಿ ಗ್ರಾಮಕ್ಕೆ ದೌಡಾಯಿಸಿರುವ ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ನೇತೃತ್ವದ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದ ಹಾಡುವಳ್ಳಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸ್ವತಃ ಜಿಲ್ಲಾಧಿಕಾರಿ ಮುಲೈ ಮುಹಿಲಿನ್ ಅವರೇ ಜನರನ್ನು ಕರೆದು ಸಮಸ್ಯೆಗಳನ್ನು ಆಲಿಸಿದರು. ಅಂಗವಿಕಲರ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂತ್ಯ ಸಂಸ್ಕಾರ ಯೋಜನೆ ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಅಧಿಕಾರಿಗಳನ್ನು ಕರೆದು ಪರಿಹಾರಕ್ಕೆ ಸೂಚಿಸಿದರು.

ಆಧಾರ್​ ನೋಂದಣಿ, ಬಿಪಿಲ್ ಕಾರ್ಡ್ ಪಡೆಯಲು ಸಾಧ್ಯವಾಗದೇ ಇದ್ದವರಿಗೆ ಸ್ಥಳದಲ್ಲಿಯೇ ಕಂಪ್ಯೂಟರ್‌ ಮೂಲಕ ನೋಂದಾಯಿಸಿಕೊಂಡು ಪ್ರತಿಗಳನ್ನು ವಿತರಿಸಲಾಯಿತು.

ರಸ್ತೆ ದುರಸ್ತಿ, ಕಳಪೆ ಕಾಮಗಾರಿ, ಒಳ ಚರಂಡಿ, ವಿದ್ಯುತ್ ದೀಪ ದುರಸ್ತಿ ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ಸಮಯ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲೈ ಮುಹಿಲಿನ್, ಸರ್ಕಾರ ಮನೆ ಬಾಗಿಲೆಗೆ ತೆರಳಿ ಸರ್ಕಾರಿ ಸೌಲಭ್ಯಗಳನ್ನು ನೀಡಲು ಈ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದೆ.

ಬೆಳಗ್ಗೆಯಿಂದ ಆರಂಭಗೊಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಗ್ರಾಮಸ್ಥರು ಯಾವುದೇ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ABOUT THE AUTHOR

...view details