ಭಟ್ಕಳ/ಉತ್ತರ ಕನ್ನಡ:ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ದೇವರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೇವಸ್ಥಾನಕ್ಕೆ ಕಾಣಿಕೆ ಮತ್ತು ಹರಕೆ ರೂಪದಲ್ಲಿ ಬಂದ ಚಿನ್ನಾಭರಣಗಳನ್ನು ದಿನಾಂಕ 15/09/2019ರಿಂದ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ ನರಸಿಂಹ ಭಟ್ಟ ಅವರಿಗೆ ನಿರ್ವಹಣೆ ಮಾಡಲು ಕೊಡಲಾಗಿತ್ತು. ಅವುಗಳನ್ನು ದೇವಿಯ ಗರ್ಭಗುಡಿಯಲ್ಲಿ ಅಲ್ಯೂಮಿನಿಯಂ ಬಾಕ್ಸ್ನಲ್ಲಿಟ್ಟು ಬೀಗ ಹಾಕಲಾಗಿತ್ತು. ನವರಾತ್ರಿ ಉತ್ಸವ ಆರಂಭ ಹಿನ್ನೆಲೆ ನವರಾತ್ರಿಯ ಮೊದಲನೇ ದಿನ ಬೆಳಗ್ಗೆ ದೇವಸ್ಥಾನದ ಅರ್ಚಕರು ದೇವಿಗೆ ಚಿನ್ನದ ಆಭರಣ ತೊಡಿಸಲು, ಆಭರಣ ಪೆಟ್ಟಿಗೆಯ ಕೀ ಹುಡುಕಾಡಿದಾಗ ಕೀ ಸಿಗದ ಕಾರಣ ಇತರೆ ಅರ್ಚಕರಲ್ಲಿ ವಿಚಾರಿಸಿದ್ದಾರೆ. ಈ ಬಗ್ಗೆ ಅವರು ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಹಿಂದೆ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಸತೀಶ ರಾಮಚಂದ್ರ ಭಟ್ ಅವರನ್ನು ವಿಚಾರಿಸಲು ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ದೇವಿಯ ಮಧ್ಯಾಹ್ನದ ಪೂಜೆಯ ಅಲಂಕಾರಕ್ಕೆ ಚಿನ್ನಾಭರಣ ಅಗತ್ಯವಿದ್ದರಿಂದ ಅಲ್ಯೂಮಿನಿಯಂ ಬಾಕ್ಸ್ ಒಡೆದು ನೋಡಿದಾಗ ಬಾಕ್ಸ್ನಲ್ಲಿದ್ದ 670 ಗ್ರಾಂ ತೂಕದ ಚಿನ್ನಾಭರಣ ಹಾಗೂ 225 ಗ್ರಾಂ ತೂಕದ ಬೆಳ್ಳಿ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಅಂದಾಜು 30 ಲಕ್ಷ ರೂ. ಮೌಲ್ಯದ ದೇವಿಯ ಒಡವೆಗಳು ಕಾಣೆಯಾಗಿವೆ ಎನ್ನಲಾಗಿದೆ.
ಆಡಳಿತ ಮಂಡಳಿಯ ನಿಷ್ಕಾಳಜಿಗೆ ಬೇಸರ:
ಈ ದೇವಸ್ಥಾನದ ಚಿನ್ನಾಭರಣ ಸುರಕ್ಷಿತವಾಗಿಡಲು 20 ವರ್ಷದಿಂದ ಬ್ಯಾಂಕ್ ಒಂದರಲ್ಲಿ ಭದ್ರತಾ ಲಾಕರ್ ತೆರೆಯಲಾಗಿದೆ. ಆದರೆ ಕಳೆದ ವರ್ಷ ದೇವಸ್ಥಾನದ ಆಡಳಿತ ಮಂಡಳಿಯ ಬದಲಾವಣೆ ಸಂದರ್ಭದಲ್ಲಿ ಹಿಂದೆ ಇದ್ದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಚಿನ್ನಾಭರಣ ಹಸ್ತಾಂತರ ಮಾಡಿದ್ದರು. ಇದಾದ ಬಳಿಕ ಚಿನ್ನಾಭರಣವನ್ನು ಬ್ಯಾಂಕ್ ಲಾಕರ್ನಲ್ಲಿ ಇಡದೆ, ದೇವಸ್ಥಾನದ ಗರ್ಭಗುಡಿಯಲ್ಲಿ ಅಲ್ಯೂಮಿನಿಯಂ ಬಾಕ್ಸ್ನಲ್ಲಿರಿಸಿಸಲಾಗಿತ್ತು. ಹೀಗಾಗಿ ಇದು ನೂತನ ಆಡಳಿತ ಮಂಡಳಿಯ ನಿಷ್ಕಾಳಜಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪೂಜೆ ಮಾಡುತ್ತಿದ್ದ ಅರ್ಚಕನ ಮೇಲೆ ಶಂಕೆ:
ದೇವಾಲಯದ ಮೂಲ ಅರ್ಚಕರು ತಮ್ಮ ಸಹಾಯಕ್ಕಾಗಿ ಯಲ್ಲಾಪುರ ಮೂಲದ ಅರ್ಚಕರೋರ್ವರನ್ನು ನೇಮಿಸಿಕೊಂಡಿದ್ದರು. ಆದರೆ ಅವರು ಕಳೆದ ಗಣೇಶ ಚತುರ್ಥಿಗೆ ಹೋದವರು ಇದುವರೆಗೂ ಭಟ್ಕಳಕ್ಕೆ ಮರಳಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಈ ಸಹಾಯಕ ಅರ್ಚಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಚಿನ್ನಾಭರಣ ಯಾವಾಗ ಕಳುವಾಗಿದೆ ಎಂದು ನಿಖರವಾದ ಮಾಹಿತಿ ಇಲ್ಲವಾಗಿದ್ದು, ಗರ್ಭಗುಡಿಯ ಬಾಗಿಲನ್ನು ಮುರಿಯದೆ ಚಿನ್ನಾಭರಣ ನಾಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹೇಮಂತ ದುರ್ಗಪ್ಪ ಮೊಗೇರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.