ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಕಾಂಗ್ರೆಸ್ ಬಿಜೆಪಿಗೆ ಠಕ್ಕರ್: ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಜೆಡಿಎಸ್!

ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಇದೀಗ ಜೆಡಿಎಸ್​ ಸೇರ್ಪಡೆಗೊಂಡು ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

By

Published : Apr 17, 2023, 12:09 PM IST

Updated : Apr 17, 2023, 12:33 PM IST

Woman candidate of JDS
ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಜೆಡಿಎಸ್

ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಜೆಡಿಎಸ್

ಕಾರವಾರ: ಕಾರವಾರ - ಅಂಕೋಲಾ ವಿಧಾನಸಭಾ ಕ್ಷೇತ್ರ ಚುನಾವಣೆ ಸಮೀಪಿಸುತ್ತಿರುವಂತೆ ರಂಗು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಕೇವಲ ರಾಷ್ಟ್ರೀಯ ಪಕ್ಷಗಳ ನಡುವೆ ಮಾತ್ರ ಫೈಟ್ ನಡೆಯಲಿದೆ ಎನ್ನಲಾದ ಕ್ಷೇತ್ರದಲ್ಲಿ ಇದೀಗ ಜೆಡಿಎಸ್ ಎಂಟ್ರಿ ಕೊಟ್ಟಿದ್ದು, ಇಬ್ಬರೂ ಘಟಾನುಘಟಿ ನಾಯಕರುಗಳಿಗೆ ಠಕ್ಕರ್ ಕೊಡಲು ಮಹಿಳಾ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿ ಆ‌ ಮೂಲಕ ಮಾಜಿ - ಹಾಲಿ ಶಾಸಕರಿಗೆ ಜೆಡಿಎಸ್ ಠಕ್ಕರ್ ನೀಡುವ ಪ್ರಯತ್ನ ನಡೆಸಿದೆ.

ಹೌದು, ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದವರೇ ಈ ಬಾರಿಯೂ ಸಹ ಮುಖಾಮುಖಿಯಾಗುತ್ತಾರೆ ಎನ್ನುವ ನಿರೀಕ್ಷೆಗಳಿತ್ತು. ಆದರೆ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಜೆಡಿಎಸ್‌ನಿಂದ ಹಿಂದೆ ಸರಿದು ಪಕ್ಷೇತರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಜೆಡಿಎಸ್ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಕಾಂಗ್ರೆಸ್ ಆಕಾಂಕ್ಷಿ ಇರುವಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸಿ ಬೆಂಬಲಿಗರು, ಆಪ್ತರನ್ನು ಭೇಟಿಯಾಗಿದ್ದ ಚೈತ್ರಾ ಇದೀಗ ಜೆಡಿಎಸ್ ಪಕ್ಷದಡಿ ಸ್ಪರ್ಧಿಸಲಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡ ಕ್ಷಣವೇ ಬಿ ಫಾರಂ ಅನ್ನು ಸಹ ಪಡೆದುಕೊಂಡಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಚುನಾವಣಾ ತಯಾರಿಗೆ ಮುಂದಾಗಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್‌ಗೆ ಎದುರಾಗಿ ಜೆಡಿಎಸ್‌ನಿಂದ ಚೈತ್ರಾ ಕೊಠಾರಕರ್ ಕಣಕ್ಕಿಳಿದಿರುವುದು ತ್ರಿಕೋನ ಸ್ಪರ್ಧೆಯ ನಿರೀಕ್ಷೆ ಮೂಡಿಸಿದೆ.

ಇನ್ನು ಪಕ್ಷೇತರವಾಗಿ ಸ್ಪರ್ಥಿಸಲು ಮುಂದಾಗಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇದೀಗ ಹಠಾತ್ತಾಗಿ ಕಣದಿಂದ ಹಿಂದೆ ಸರಿದಿದ್ದು, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬೆಂಬಲಿಗರಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದಾರೆ. ಪರಿಣಾಮ ಕ್ಷೇತ್ರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರಾನೇರ ಹಣಾಹಣಿ ನಡೆಯಲಿದ್ದು ತೀವ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.

ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುವ ಚೈತ್ರಾ ಕೊಠಾರಕರ್‌ ಅವರಿಗೆ ಕ್ಷೇತ್ರದಲ್ಲಿ ಉತ್ತಮ ಹೆಸರು ಇದ್ದು, ಮತದಾರರು ಹೊಸ ಮುಖದ ನಿರೀಕ್ಷೆಯಲ್ಲಿರುವುದು ತಮಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನು ಅಭ್ಯರ್ಥಿ ಆಗಮನದಿಂದ ಜೆಡಿಎಸ್ ಕಾರ್ಯಕರ್ತರಿಗೂ ಸಹ ಹೊಸ ಹುಮ್ಮಸ್ಸು ಬಂದಿದ್ದು, ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಬೆಂಬಲ ಪಡೆದು ಈ ಬಾರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.

ಒಟ್ಟಾರೇ ಇಬ್ಬರ ನಡುವಿನ ಮುಖಾಮುಖಿ ಎನ್ನುವಂತಿದ್ದ ಚುನಾವಣಾ ಕಣ ಇದೀಗ ಜೆಡಿಎಸ್ ಎಂಟ್ರಿಯಿಂದ ತ್ರಿಕೋನ ಸ್ಪರ್ಧೆಗೆ ಸಿದ್ಧವಾಗಿದ್ದು, ಮತದಾರ ಪ್ರಭು ಯಾರಿಗೆ ಆಶೀರ್ವದಿಸಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023.. ರಾಮನಗರದಲ್ಲಿ ಇಂದು ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

Last Updated : Apr 17, 2023, 12:33 PM IST

ABOUT THE AUTHOR

...view details