ಶಿರಸಿ:ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿಂದ ಸ್ತಬ್ಧವಾಗಿದ್ದ ಜೇವರ್ಗಿ ನಾಟಕ ಕಂಪನಿ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ. 'ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ' ಎಂಬ ಸಾಮಾಜಿಕ ನಾಟಕ ಪ್ರದರ್ಶನದ ಮೂಲಕ ಕಲಾವಿದರು ಜನರನ್ನು ರಂಜಿಸಲು ಕಂಪನಿ ಮುಂದಾಗಿದೆ.
ಪ್ರತಿವರ್ಷದಂತೆ 2020ರ ಶಿರಸಿ ಮಾರಿಕಾಂಬಾ ಜಾತ್ರೆಯ ವೇಳೆ 5 ರಿಂದ 6 ನಾಟಕ ಕಂಪನಿಗಳು ಜನರಿಗೆ ಮನರಂಜನೆ ನೀಡಲು ನಗರದ ವಿವಿಧೆಡೆ ಟೆಂಟ್ ಹಾಕಿದ್ದವು. ಆದರೆ ಕೊರೊನಾ ಸಮಸ್ಯೆಯಿಂದ ಸರ್ಕಾರದ ಸೂಚನೆಯಂತೆ 15 ದಿನಗಳಲ್ಲಿ ಪ್ರದರ್ಶನ ಬಂದ್ ಮಾಡಲಾಗಿತ್ತು. ಈಗ ಮತ್ತೆ ನಾಟಕ ಪ್ರದರ್ಶನ ಆರಂಭವಾಗಿದ್ದು, ನಾಟಕಪ್ರಿಯರ ಮನ ತಣಿಸಲು ಕಲಾವಿದರು ತಯಾರಿ ನಡೆಸುತ್ತಿದ್ದಾರೆ. ಇಲ್ಲಿರುವ ಐದಾರು ನಾಟಕ ಕಂಪನಿಗಳಲ್ಲಿ ಈಗ ಕೇವಲ ಒಂದು ಕಂಪನಿ ಮಾತ್ರ ಉಳಿದುಕೊಂಡಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್, ಕಡ್ಡಾಯ ಮಾಸ್ಕ್ ಬಳಕೆ ಸೇರಿದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದಾರೆ.