ಭಟ್ಕಳ: ಬೇರೆ ಪಕ್ಷದಂತೆ ನಮ್ಮಲ್ಲಿಯೂ ಯುವಪಡೆ ಕಟ್ಟಿ ಯುವ ಜನತಾದಳ ಸಂಘಟನೆಯನ್ನು ಬಲವರ್ಧಿಸಬೇಕು. ನಾವು ಆಡಳಿತದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ತಳಮಟ್ಟದವರೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಯುವ ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ. ನೂರ ಅಹಮದ್ ಹೇಳಿದರು.
ಯುವಕರನ್ನು ಒಗ್ಗೂಡಿಸಿ ಯುವ ಜನತಾದಳ ಸಂಘಟಿಸಬೇಕು: ನೂರ ಅಹಮದ್ - ಯುವ ಜನತಾದಳ
ಯುವಪಡೆಯನ್ನು ಕಟ್ಟಿ ಯುವ ಜನತಾದಳವನ್ನು ಬಲವರ್ಧನೆ ಮಾಡಬೇಕು ಎಂದು ಯುವ ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ. ನೂರ ಅಹಮದ್ ಹೇಳಿದರು.
'ಸುಭದ್ರ ಭಟ್ಕಳಕ್ಕೆ ನಿಮ್ಮ ಯುವ ಜೆಡಿಎಸ್' ಕಾರ್ಯಕ್ರಮದ ಅಂಗವಾಗಿ ಭಟ್ಕಳಕ್ಕೆ ಆಗಮಿಸಿದ ವೇಳೆ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಆದೇಶದಂತೆ ಮೊಟ್ಟ ಮೊದಲ ಪ್ರವಾಸ ಭಟ್ಕಳಕ್ಕೆ ಬಂದಿದ್ದು, ಪಕ್ಷಕ್ಕೂ, ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ. ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಲಾಗಿದ್ದು, ಆದರೆ ಕೊರೊನಾ ಹಿನ್ನೆಲೆ ರಾಜ್ಯ ಪ್ರವಾಸ ಸಾಧ್ಯವಾಗಲಿಲ್ಲ ಎಂದರು.
ಮುಖ್ಯವಾಗಿ ಬೇರೆ ಪಕ್ಷದಂತೆ ಯುವಕರನ್ನು ಒಗ್ಗೂಡಿಸಿ ಬೂತ್ ಮಟ್ಟದಲ್ಲಿ ನಮ್ಮ ಪಕ್ಷವನ್ನು ಬಲಿಷ್ಠ ಮಾಡಲಿದ್ದೇವೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದ್ದು, ಈ ಮಟ್ಟದಲ್ಲಿ ಬೃಹತ್ ಯೋಜನೆಯನ್ನು ರೈತರಿಗೆ ಯಾವ ಸರ್ಕಾರವೂ ನೀಡಿಲ್ಲ. ಆದರೆ ಬಿಜೆಪಿ ವಾಮಮಾರ್ಗದಿಂದ ಸರ್ಕಾರ ರಚನೆ ಮಾಡಿದೆ. ಹಾಗಾಗಿ ಯಾವುದೇ ಹಿನ್ನಡೆ ಎಂದುಕೊಳ್ಳದೇ, ಪಕ್ಷ ಬಲವರ್ಧನೆ ಮಾಡಿ ಮತ್ತೆ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಹೇಳಿದರು.