ಶಿರಸಿ:ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ವಾದಿ ದಿಗಂಬರ ಜೈನ ಮಠದಲ್ಲಿ ವಿಜಯ ದಶಮಿಯ ಅಂಗವಾಗಿ ಜೈನ ತೀರ್ಥಂಕರ ಮೂರ್ತಿ ಜಂಬೂ ಸವಾರಿ ಅದ್ಧೂರಿಯಾಗಿ ನಡೆಯಿತು.
ಶರನ್ನವರಾತ್ರಿ ಅಂಗವಾಗಿ ನಡೆದ ವಿಜಯ ದಶಮಿಯಂದು ಕ್ಷೇತ್ರದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ದಿವ್ಯೋಪಸ್ಥಿತಿಯಲ್ಲಿ ಗಜಗಾಂಭೀರ್ಯದಿಂದ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅದ್ಭುತ ಕ್ಷಣವನ್ನು ತಮ್ಮದಾಗಿಸಿಕೊಂಡರು. ಶ್ರೀಗಳು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಇತರ ಗಣ್ಯರು ಅಕಲಂಕರ ಭಾವಚಿತ್ರ ಹೊತ್ತ ಆನೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀ ಮಠದಲ್ಲಿ ನವರಾತ್ರಿಯ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ಶ್ರೀಗಳು, ಪಂಚಾಮೃತಾಭಿಷೇಕ ಪೂರ್ಣಗೊಳಿಸಿದರು. ನಂತರ ಶ್ರೀಮದ್ ಆಚಾರ್ಯ ಅಕಲಂಕರ ಭಾವಚಿತ್ರ ಹಾಗೂ ಚರಣ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ಶ್ರೀಗಳು, ಅಂಬಾರಿ ಹೊತ್ತ ಸರ್ವಾಲಂಕಾರ ಆನೆಗೆ ಪೂಜೆ ನೆರವೇರಿಸಿದರು. ಶ್ವೇತದ ಸಾರಥ್ಯದಲ್ಲಿ ಜಂಬೂ ಸವಾರಿ ನಡೆಯಿತು. ಮಹಿಳೆಯರು ಪೂರ್ಣ ಕುಂಭ ಹೊತ್ತು ಸಾಗಿದರು. ಡೊಳ್ಳು, ತಮಟೆ, ಶಹನಾಯಿ ವಾದನಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದವು. ನಿಶಿಧಿ ಬಳಿ ಇರುವ 21 ಪೂರ್ವಾಚಾರ್ಯರ ಚರಣ ಪಾದುಕೆಗಳಿಗೆ ಶ್ರೀಗಳು ಪಂಚಾಮೃತ ಅಭಿಷೇಕ ನಡೆಸಿದರು. ಶಮಿ ಪೂಜೆಯ ನಂತರ ಬನ್ನಿ ವಿತರಣೆ ನೆರವೇರಿಸಿದರು.
ಮಠದಲ್ಲಿ ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು. ಶ್ರೀಗಳಿಂದ ಪಾರಂಪರಾಗತ ಸದ್ಧರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ ಕಾರ್ಯ ಸಾಂಗವಾಗಿ ಸಾಗಿತು. ನಂತರ ಮಠದಲ್ಲಿ ಸ್ವಾಮೀಜಿಯವರ ಪೀಠಾರೋಹಣ ಕಾರ್ಯಕ್ರಮ ನೆರವೇರಿತು. ಭಕ್ತಾದಿಗಳಿಗೆ ಶ್ರೀಫಲಮಂತ್ರಾಕ್ಷತೆ ವಿತರಣೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಜಂಬೂ ಸವಾರಿ ಕಂಡು ಪುನೀತರಾದರು.