ಶಿರಸಿ (ಉತ್ತರ ಕನ್ನಡ):ಬಿಜೆಪಿಯ ಹಿರಿಯ ನಾಯಕ, ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ (ಇಂದು) ರಾಜೀನಾಮೆ ಸಲ್ಲಿಸಿದರು. 6 ಬಾರಿಯ ಶಾಸಕರಾಗಿದ್ದ ಶೆಟ್ಟರ್ ಶಿರಸಿಗೆ ಆಗಮಿಸಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿ ತಮ್ಮ ರಾಜೀನಾಮೆ ಪತ್ರ ನೀಡಿದರು. ನಂತರ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ನಾನು ರಾಜೀನಾಮೆ ನೀಡುವ ಕುರಿತು ನನ್ನನ್ನು ಬಿಜೆಪಿ ಹೈಕಮಾಂಡ್ ಸಂಪರ್ಕಿಸಿ, ಮಾತನಾಡಿದ್ದಾರೆ. ಆದರೆ ಟಿಕೆಟ್ ನೀಡದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜೊತೆಗೆ ಪಕ್ಷದ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು. ಶಾಸಕನಾಗಿ ಕೆಲಸ ಮಾಡುವುದು ಬೇಡ ಎನ್ನಲು ನನ್ನಲ್ಲಿರುವ ಸಣ್ಣ ಮಿಸ್ಟೇಕ್ ತೋರಿಸಲಿ. ಕಪ್ಪು ಚುಕ್ಕೆ, ಅನಾರೋಗ್ಯ, ಯಾವುದೋ ಸಿಡಿ, ರೌಡಿ ಶೀಟರ್ ಯಾವುದೂ ಇಲ್ಲ ಎಂದು ಶೆಟ್ಟರ್ ಹೇಳಿದ್ರು.
ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಫೈಟ್: ಟೆಂಗಿನಕಾಯಿ ಸೇರಿ ಆಕಾಂಕ್ಷಿಗಳ ಹಾದಿ ಸುಗಮ?
30 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷವೂ ನನಗೆ ಸಹಾಯ ಮಾಡಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಲು ಸಹಕರಿಸಿದ್ದೇನೆ. ಅಭ್ಯರ್ಥಿಗಳು ಸಿಗದೇ ಹೋದಾಗ ಪ್ರಚಾರ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಪಕ್ಷ ಬಲಿಷ್ಠವಾಗಿಸಿದೆ. ಆದರೆ ಈಗ ಮೂಲವಾಗಿ ಬಿಜೆಪಿಯಲ್ಲಿ ಇದ್ದವರನ್ನು ಹೊರಹಾಕಲಾಗುತ್ತಿದೆ. ನಮ್ಮ ಮನೆಯಿಂದ ನಮ್ಮನ್ನು ಹೊರಹಾಕಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.