ಕಾರವಾರ (ಉತ್ತರ ಕನ್ನಡ) : ಚಂದ್ರಯಾನ 3 ಯಶಸ್ವಿ ಉಡಾವಣೆಯಾಗಿದ್ದು, ನೌಕೆ ಇದೀಗ ಮೂರನೇ ಕಕ್ಷೆ ದಾಟಿ ಮುಂದೆ ಸಾಗಿದೆ. ಇಂತಹ ಯಶಸ್ವಿ ಯೋಜನೆ ಉಡಾವಣೆ ಹಿಂದೆ ಕಾರವಾರ ಮೂಲದ ಇಸ್ರೋ ವಿಜ್ಞಾನಿ ಡಾಕ್ಟರ್ ಜಗದೀಶಚಂದ್ರ ನಾಯ್ಕ ಕೂಡ ಕಾರ್ಯನಿರ್ವಹಿಸಿದ್ದು, ಜಿಲ್ಲೆಯ ಜನ ಹೆಮ್ಮೆಪಡುತ್ತಾರೆ.
ಚಂದ್ರಯಾನ 3ರ ವೇಳೆ ಡಾ ಜಗದೀಶಚಂದ್ರ ನಾಯ್ಕ ಉಪಗ್ರಹ ಉಡಾವಣೆ ಮತ್ತು ಡಾಟಾ ಸಂಸ್ಕರಣೆ ಒಳಗೊಂಡ ವಿವಿಧ ಯೋಜನೆಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಮೇಜ್ ಪ್ರೋಸೆಸಿಂಗ್‌ನಲ್ಲಿ ಪಿಹೆಚ್‌ಡಿ ಪಡೆದಿರುವ ಡಾ. ಜಗದೀಶಚಂದ್ರ ಪ್ರಸ್ತುತ ಮೈಕ್ರೋಸ್ಯಾಟ್-2ಎ/2ಬಿಗಾಗಿ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ (ಮಿಷನ್ ಸಾಫ್ಟ್ವೇರ್) ಮತ್ತು ಹೆಚ್‌ವೈಎಸ್‌ವೈಎಸ್/ ಆರ್‌ಐಎಸ್‌ಎಟಿ-2ಎ ಸ್ಪೇಸ್‌ಕ್ರಾಫ್ಟ್ ಮಿಷನ್ ಮತ್ತು ಚೆಕ್‌ಔಟ್ ಸಾಫ್ಟ್ವೇರ್ ಗ್ರೂಪ್‌ನ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿಭಾಯಿಸುತ್ತಿದ್ದಾರೆ.
ಜಗದೀಶಚಂದ್ರ ತಾಲ್ಲೂಕಿನ ಬಾಡದ ನ್ಯೂ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬಳಿಕ ಸುಳ್ಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದಿದ್ದರು. ನಂತರ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್ ಇನ್ಸ್ಟಿಟ್ಯೂಟ್ನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಅಧ್ಯಯನ (ಎಂ.ಟೆಕ್.) ಪಡೆದಿದ್ದರು. ಇದೀಗ ವಿಶ್ವವೇ ತಿರುಗಿ ನೋಡುವಂತಹ ಚಂದ್ರಯಾನ ಯಶಸ್ವಿ ಉಡಾವಣೆಯಲ್ಲಿ ಕಾರ್ಯನಿರ್ವಹಿಸಿರುವುದು ಕಾರವಾರ ಹಾಗೂ ಜಿಲ್ಲೆಯ ಜನರಿಗೆ ಹೆಮ್ಮೆ ಸಂಗತಿ ಎಂದು ಪ್ರೀಮಿಯರ್ ಎಜ್ಯುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ನಾಗರಾಜ ಜೋಶಿ ಮಾಹಿತಿ ನೀಡಿದರು.
ಚಂದ್ರಯಾನ 3 ತಂಡದಲ್ಲಿದ್ದ ಚಿಕ್ಕಮಗಳೂರಿನ ಡಾ ನಂದಿನಿ:ಆಂಧ್ರಪ್ರದೇಶದ ಶ್ರೀ ಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿದ ಚಂದ್ರಯಾನ 3 ರ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಯುವತಿ (ಜುಲೈ 14-2023) ಭಾಗವಹಿಸಿದ್ದು, ಜಿಲ್ಲೆಯ ಜನರ ಸಂತಸ ಸಂಭ್ರಮಕ್ಕೆ ಕಾರಣವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ, ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಯುವತಿ ಇರುವುದು ಆ ಜಿಲ್ಲೆಗೆ ಮಾತ್ರವಲ್ಲದೇ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ.
ಬಾಳೆಹೊನ್ನೂರು ನಗರದಲ್ಲಿ ಕಾಫಿ ವ್ಯವಹಾರ ಮಾಡುತ್ತಿರುವ ಕೇಶವ ಮೂರ್ತಿ, ಮಂಗಳ ದಂಪತಿಯ ಪುತ್ರಿ ಡಾ. ಕೆ. ನಂದಿನಿ ಚಂದ್ರಯಾನ 3 ತಂಡದಲ್ಲಿ ಇದ್ದು, ಅಂದು ನಡೆದ ಯಶಸ್ವಿ ಉಡಾವಣೆಯಲ್ಲಿಯೂ ಇವರು ಪಾಲ್ಗೊಂಡಿದ್ದರು. ಇದರಿಂದ ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಸಂತೋಷ ಹಾಗೂ ಸಂಭ್ರಮ ಸಡಗರ ತರಿಸಿತ್ತು. ಡಾ. ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019 ರ ಚಂದ್ರಯಾನ 2 ರ ತಂಡದಲ್ಲೂ ಭಾಗವಹಿಸಿದ್ದರು. ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತರುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಂದಿನಿ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಮೂಡುಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್‌ನಲ್ಲಿ ಪೂರೈಸಿದ್ದಾರೆ.
ಇದನ್ನೂ ಓದಿ:Chandrayana 3: ಚಂದ್ರಯಾನ 3 ತಂಡದಲ್ಲಿದ್ದ ಚಿಕ್ಕಮಗಳೂರಿನ ಡಾ.ನಂದಿನಿ